

ಬಾಳೆಹೊನ್ನೂರು: ಚಿಕ್ಕಮಗಳೂರು ತಾಲೂಕು ಹುಯಿಗೆರೆ ಗ್ರಾಮದ ಬಿಕ್ಕರಣೆ ಹಾಗೂ ಕುಂದೂರು ಸಮೀಪದ ಸಾರಗೋಡು ಗ್ರಾಮದಲ್ಲಿ ಸೋಮವಾರ ಕಾಡಾನೆಗಳ ಹಿಂಡು ಪತ್ತೆಯಾಗಿದ್ದು ಗ್ರಾಮಸ್ಥರು ಆತಂಕಕ್ಕೆ ಈಡಾಗಿದ್ದಾರೆ.
ಬಿಕ್ಕರಣೆ, ಸಾರಗೋಡು ಬಳಿ ಕೆಲವು ತೋಟಗಳಲ್ಲಿ ಏಳು ಕಾಡಾನೆಗಳು ಕಾಣಿಸಿಕೊಂಡಿದ್ದು ಕಾಫಿ, ಅಡಕೆ ಸೇರಿದಂತೆ ವಿವಿಧ ಬೆಳೆಗಳನ್ನು ಹಾನಿ ಮಾಡಿವೆ. ಹುಲಿಗೆಹಳ್ಳ ಎಂಬಲ್ಲಿ ಸೋಮವಾರ ಬೆಳಗ್ಗೆ ಹತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಹಳ್ಳದ ಸಮೀಪದಲ್ಲಿ ಇರುವುದನ್ನು ಜನ ನೋಡಿದ್ದಾರೆ. ಈ ಭಾಗದಲ್ಲಿ ಹಲವು ಸಮಯದಿಂದ ಕಾಡಾನೆಗಳು ಆಗಾಗ ದಾಳಿ ಮಾಡುತ್ತಿದ್ದು ಇದೀಗ ಹತ್ತಾರು ಕಾಡಾನೆಗಳು ಒಮ್ಮೆಗೇ ಪ್ರತ್ಯಕ್ಷವಾಗಿರುವುದರಿಂದ ಜನರು ಆತಂಕಗೊಂಡಿದ್ದಾರೆ. ಗ್ರಾಮಸ್ಥರು ಆನೆಗಳನ್ನು ಕಾಡಿಗೆ ಅಟ್ಟುವ ಪ್ರಯತ್ನ ನಡೆಸಿದರೂ ಅವು ತೋಟ ಬಿಟ್ಟು ಕದಲುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.