

ಬೇಲೂರು : ತಾಲೂಕಿನ ಬಿಕ್ಕೋಡು ಸಮೀಪದ ಕೆರೆಯಲ್ಲಿ ಮಂಗಳವಾರ ಈಜಾಡಿದ ಕಾಡಾನೆಗಳು ನಂತರ ನಿಡುಮನಹಳ್ಳಿ ಗ್ರಾಮಕ್ಕೆ ತೆರಳಿ ಜೋಳದ ಬೆಳೆ ತಿಂದು ನಾಶಪಡಿಸಿ ತೋಟದೊಳಗೆ ಕಣ್ಮರೆಯಾಗಿದ್ದವು. ಆದರೆ ಕಾಡಾನೆಗಳ ಹಿಂಡು ಬುಧವಾರ ಬಿಕ್ಕೋಡು ಸಮೀಪದ ಕೆಳ್ಳಬಿಕ್ಕೋಡು ಗ್ರಾಮಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಜನರು ಪ್ರಾಣಭಯದಿಂದ ಓಡಿದರು.
ತಾಲೂಕಿನ ಮಲೆನಾಡು ಭಾಗದ ವಿವಿಧ ಗ್ರಾಮಗಳಲ್ಲಿ ಮುಂದುವರಿದ ಕಾಡಾನೆಗಳ ಉಪಟಳದಿಂದ ಮೊದಲೇ ರೋಸಿ ಹೋಗಿದ್ದ ಜನರಿಗೆ 20 ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ಮರಿಗಳೊಂದಿಗೆ ಮನೆ ಸಮೀಪಕ್ಕೆ ಬಂದ ಹಿನ್ನೆಲೆಯಲ್ಲಿ ಆತಂಕ ಇನ್ನೂ ಹೆಚ್ಚಿತ್ತು. ಆನೆಗಳೂ ಸಹ ಮನಸ್ಸಿಗೆ ಬಂದಂತೆ ಓಡಾಡಿದ ಹಿನ್ನೆಲೆಯಲ್ಲಿ ಸಾಕಷ್ಟು ಬೆಳೆ ನಷ್ಟವಾಗಿದೆ.
ಕಾಡಾನೆಗಳು ಆಹಾರ ಅರಸಿ ಗ್ರಾಮಗಳಿಗೆ ನುಗ್ಗಿದ್ದು, ತೋಟ, ಹೊಲ, ಗದ್ದೆಗಳಲ್ಲಿ ಬೆಳೆದಿರುವ ಕಾಫಿ, ಜೋಳ, ಶುಂಠಿ, ಭತ್ತದ ಬೆಳೆಗಳನ್ನು ಸಂಪೂರ್ಣ ನಾಶ ಪಡಿಸುತ್ತಿವೆ. ರೈತರು, ಕೂಲಿ ಕಾರ್ಮಿಕರು, ಬೆಳೆಗಾರರು ತೋಟ ಜಮೀನುಗಳತ್ತ ಸುಳಿಯದಂತಾಗಿದೆ. ಆನೆಗಳು ಸ್ವಚ್ಛಂದವಾಗಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಯಾವುದೇ ಭಯವಿಲ್ಲದೆ ಹಿಂಡು ಹಿಂಡಾಗಿ ಓಡಾಡುತ್ತಿವೆ.
ಕಾಡಾನೆಗಳ ಉಪಟಳದಿಂದ ಬೆಳೆ ಕಳೆದುಕೊಂಡ ಅನ್ನದಾತರು ಮಾತ್ರ ಕಂಗಾಲಾಗಿದ್ದು, ಅರಣ್ಯ ಇಲಾಖೆ ಅಕಾರಿಗಳಿಗೆ ಮತ್ತು ಸರ್ಕಾರಕ್ಕೆ ಶಾಪ ಹಾಕುತಿದ್ದಾರೆ. ಆದರೆ ಈ ಎಲ್ಲ ಬೆಳವಣಿಗೆಗಳ ನಡುವೆಯೂ ಸ್ಥಳದಲ್ಲೆ ಮೊಕ್ಕಾಂ ಹೂಡಿರುವ ಅರಣ್ಯ ಇಲಾಖೆ ಅಕಾರಿಗಳು ಮತ್ತು ಇಟಿಎ್ ಸಿಬ್ಬಂದಿ ಮಾತ್ರ ಕಾಡಾನೆಗಳನ್ನು ಕಾಡಿಗೆ ಓಡಿಸಲು ಇನ್ನಿಲ್ಲದಂತೆ ಹಗಲು, ರಾತ್ರಿ ಎನ್ನದೆ ಹರ ಸಾಹಸ ಪಡುತಿದ್ದಾರೆ.
ಇತ್ತ ಗ್ರಾಮಸ್ಥರು ಕಾಡಾನೆಗಳ ಹಾವಳಿಯಿಂದ ಭಯ, ಭೀತರಾಗಿ ಪಠಾಕಿ ಸಿಡಿಸುತ್ತಿರುವುದಲ್ಲದೆ, ತೋಟ, ಜಮೀನುಗಳತ್ತ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಬೆಳೆ ನಾಶದೊಂದಿಗೆ ಉಪಟಳ ನೀಡುತ್ತಿರುವ ಕಾಡಾನೆಗಳ ಹಿಂಡನ್ನು ಆದಷ್ಟು ಬೇಗ ದೂರದ ಅರಣ್ಯಕ್ಕೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.