

ಹಾನಗಲ್ಲ: ದಾಂಡೇಲಿ ಹಾಗೂ ಬನವಾಸಿ ಅರಣ್ಯ ಪ್ರದೇಶದಿಂದ ತಾಲೂಕಿನ ಅರಣ್ಯಕ್ಕೆ ದೌಡಾಯಿಸಿರುವ ಎರಡು ಕಾಡಾನೆಗಳ ತಂಡ ವಿವಿಧ ಗ್ರಾಮಗಳಲ್ಲಿ ಬೆಳೆ ಹಾನಿಯುಂಟು ಮಾಡುತ್ತಿದ್ದು, ರೈತರು ಆತಂಕದಲ್ಲಿದ್ದಾರೆ.
ಪ್ರತಿ ಬೇಸಿಗೆ ಸಮಯದಲ್ಲಿ ಆಹಾರ, ನೀರು ಅರಸಿಕೊಂಡು ಹಾನಗಲ್ಲ ತಾಲೂಕಿಗೆ ಕಾಡಾನೆಗಳು ಬರುವುದು ವಾಡಿಕೆಯಂತಾಗಿದೆ. ಪ್ರತಿವರ್ಷ ದಾಂಡೇಲಿ ಅರಣ್ಯ ವಲಯದಿಂದ ಮುಂಡಗೋಡ, ಕಾತೂರು, ಶಿವಪುರ, ಕಾಮನಹಳ್ಳಿ ಮಾರ್ಗವಾಗಿ ಕಾಡಾನೆಗಳು ಬರುತ್ತಿದ್ದವು. ಆದರೆ, ಈ ಬಾರಿ ಕಾಡಾನೆಗಳು ಮಾರ್ಗ ಬದಲಿಸಿವೆ. ಅಲ್ಲದೆ, ಈ ಬಾರಿ ಬನವಾಸಿ ಅರಣ್ಯ ವಲಯದಿಂದಲೂ ತಾಲೂಕಿಗೆ ಕಾಡಾನೆಗಳು ದಾಳಿಯಿಟ್ಟಿರುವುದು ಅರಣ್ಯ ಇಲಾಖೆ ಸಿಬ್ಬಂದಿ ತಲೆನೋವಿಗೆ ಕಾರಣವಾಗಿದೆ. ತಲಾ ಮೂರು ಕಾಡಾನೆಗಳ ಎರಡು ತಂಡ ಹಾಗೂ ಒಂದು ಪ್ರತ್ಯೇಕ ಆನೆ ಸೇರಿ ಒಟ್ಟು ಏಳು ಆನೆಗಳು ಇವೆ ಎನ್ನಲಾಗಿದೆ.
ತಾಲೂಕಿನ ಬಾಳಿಹಳ್ಳಿ, ಹಿರೇಕಣಗಿ, ಹುಣಶೆಟ್ಟಿಕೊಪ್ಪ, ಮೂಡೂರು, ಜಂಗಿನಕೊಪ್ಪ, ಶಿರಗೋಡ, ಮಾವಕೊಪ್ಪ, ಹನುಮಾಪುರ, ಹನುಮನಕೊಪ್ಪ, ಸರ್ಕಾರಿ ದ್ಯಾಮನಕೊಪ್ಪ, ಗಡಿಯಂಕನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳು ರಾತ್ರಿ ಸಂಚರಿಸುತ್ತಿದ್ದು, ರೈತರ ಹೊಲ-ಗದ್ದೆಗಳಲ್ಲಿನ ಬೆಳೆ ತಿಂದು ನಾಶಪಡಿಸುತ್ತಿವೆ. ರಾತ್ರಿ ಹೊಟ್ಟೆ ತುಂಬಿಸಿಕೊಂಡು ಹಗಲು ವೇಳೆಯಲ್ಲಿ ಪಕ್ಕದ ಅರಣ್ಯ ಸೇರುತ್ತಿವೆ. ಪ್ರತಿದಿನವೂ ಬೇರೆ ಬೇರೆ ಗ್ರಾಮಗಳಲ್ಲಿ ಕಾಡಾನೆಗಳ ಓಡಾಟದ ಗುರುತು ಕಂಡುಬರುತ್ತಿವೆ. ಹೀಗಾಗಿ, ಕಾಡಾನೆಗಳನ್ನು ಮರಳಿ ಓಡಿಸಲು ಅರಣ್ಯ ಇಲಾಖೆ ರಚಿಸಿರುವ ನಾಲ್ಕು ತಂಡದ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ತಂಡದಲ್ಲಿ ಒಂದು ಪುಟ್ಟ ಮರಿಯಾನೆ ಇರುವುದರಿಂದ ಕಾಡಿಗೆ ಮರಳಿಸುವುದು ನಿಧಾನವಾಗುತ್ತಿದೆ.
ಹನುಮನಕೊಪ್ಪ ಗ್ರಾಮದ ರೈತ ಶೇಖಪ್ಪ ಸಾಗರವಳ್ಳಿ ಅವರ ಹೊಲದಲ್ಲಿದ್ದ ಭತ್ತದ ರಾಶಿಯನ್ನು ಆನೆಗಳು ತಿಂದು ಹಾಕಿವೆ. ಗಡಿಯಂಕನಹಳ್ಳಿಯಲ್ಲಿ ಅಡಕೆ, ಬಾಳೆ ಗಿಡಗಳನ್ನು ನಾಶಪಡಿಸಿವೆ. ಚಿಕ್ಕೇರಿ ಹೊಸಳ್ಳಿಯಲ್ಲಿ ಶಿವಾನಂದ ಕೇಸಕ್ಕಿ ಎಂಬ ರೈತರ ಭತ್ತದ ಬಣವೆ ತಿಂದು ಮುಗಿಸಿವೆ. ಅದೇ ಗ್ರಾಮದ ಯಲ್ಲಪ್ಪ ಜನಗೇರಿ ಅವರ ತೋಟದಲ್ಲಿ ಬಾಳೆ ಮತ್ತು ಅಡಕೆ ಗಿಡಗಳನ್ನು ಕಿತ್ತು ಹಾಕಿವೆ. ಹಿರೇಕಣಗಿ ಅರಣ್ಯ ಪ್ರದೇಶದಿಂದ ದಾಳಿ ಮಾಡಿದ ಕಾಡಾನೆಗಳು ಹುಣಶೆಟ್ಟಿಕೊಪ್ಪ ಗ್ರಾಮದ ಎ.ಎಸ್. ನಂದಿಕೋಲ ಎಂಬುವವರ ಹೊಲದಲ್ಲಿನ ಕಲ್ಲಂಗಡಿ ಬೆಳೆ ತುಳಿದಾಡಿವೆ. ಬೇರೆ ಬೇರೆ ಗ್ರಾಮಗಳಲ್ಲಿ ಗೋವಿನಜೋಳ ತಿಂದು ನಾಶಪಡಿಸಿವೆ. ಸಂಜೆಯಾಗುತ್ತಿದ್ದಂತೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಮೀನು ಮತ್ತು ತೋಟಗಳಿಗೆ ಕಾಡಾನೆಗಳು ದಾಂಗುಡಿ ಇಡುತ್ತಿವೆ.
ಕಾಡಾನೆಗಳ ಪತ್ತೆಗೆ ಮಧ್ಯಾಹ್ನ ಸಮಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಕ್ಯಾಮರಾ ಬಳಸುತ್ತಿದ್ದಾರೆ. ಅರಣ್ಯದಲ್ಲಿರುವ ಕೆರೆಗಳ ಸಮೀಪ ಹಾಗೂ ಬೆಳೆ ನಾಶವಾದ ಜಮೀನುಗಳ ಪಕ್ಕದ ಅರಣ್ಯದಲ್ಲಿ ಡ್ರೊನ್ ಕ್ಯಾಮರಾ ಮೂಲಕ ಪ್ರತಿದಿನ ಆನೆ ಹಿಂಡುಗಳ ಹುಡುಕಾಟ ನಡೆಸಲಾಗುತ್ತಿದೆ. ಕೆರೆಗಳಲ್ಲಿ ಕಾಡಾನೆಗಳು ನೀರು ಕುಡಿದು ಸ್ನಾನ ಮಾಡಿ ಹೋಗಿರುವ ಹೆಜ್ಜೆ ಗುರುತು ಪತ್ತೆಯಾಗಿವೆ. ಆನೆಗಳ ಓಡಾಟದ ಗುರುತು ಕಂಡುಬಂದ ಪ್ರದೇಶದ ಗ್ರಾಮಗಳಲ್ಲಿ ರಾತ್ರಿ ವೇಳೆ ಓಡಾಡದಂತೆ ಅರಣ್ಯ ರಕ್ಷಕ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದಾರೆ.
ಕಾಡಾನೆಗಳು ಕಂಡುಬಂದಲ್ಲಿ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಆನೆ ಬೆನ್ನಟ್ಟುವುದು, ಓಡಿಸುವುದನ್ನು ಮಾಡಬಾರದು. ಇದರಿಂದ ಕಾಡಾನೆಗಳು ಮನುಷ್ಯರ ಮೇಲೆ ದಾಳಿ ಮಾಡುವ ಅಪಾಯವಿರುತ್ತದೆ. ಅರಣ್ಯ ಪ್ರದೇಶದ ಪಕ್ಕದ ತೋಟ, ಹೊಲಗಳ ರೈತರು ರಾತ್ರಿ ವೇಳೆ ತೆರಳಬಾರದು. | ಗಿರೀಶ ಚೌಗಲೆ, ಆರ್ಎಫ್ಒ ಹಾನಗಲ್ಲ