

ಹಾನಗಲ್ಲ : ಮರಿಗಳೊಂದಿಗೆ ಆಗಮಿಸಿರುವ ಐದು ಕಾಡಾನೆಗಳ ಹಿಂಡು ತಾಲೂಕಿನ ಮಾವಕೊಪ್ಪ ಗ್ರಾಮದ ಹೊಲ-ಗದ್ದೆಗಳಿಗೆ ಭಾನುವಾರ ರಾತ್ರಿ ದಾಳಿಯಿಟ್ಟು, ಗೋವಿನಜೋಳ ಹಾಗೂ ಅಡಕೆ ಗಿಡಗಳನ್ನು ನಾಶಪಡಿಸಿವೆ.
ಗ್ರಾಮದ ಅರಣ್ಯ ಪ್ರದೇಶಕ್ಕೆ ಕಾಡಾನೆಗಳು ನಾಲ್ಕೈದು ದಿನಗಳ ಹಿಂದೆಯೇ ಆಗಮಿಸಿವೆ ಎನ್ನಲಾಗಿದೆ. ಅರಣ್ಯಕ್ಕೆ ಹೊಂದಿಕೊಂಡಿರುವ ರೈತ ಪ್ರತಾಪ ತಳವಾರ ಎಂಬುವವರ ಹೊಲಕ್ಕೆ ಭಾನುವಾರ ರಾತ್ರಿ ಕಾಡಾನೆಗಳು ನುಗ್ಗಿರುವ ಮಾಹಿತಿ ಸಿಕ್ಕಿತ್ತು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ರೈತರು, ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ನೇತೃತ್ವದಲ್ಲಿ ಕಾಡಿಗೆ ಓಡಿಸಲಾಗಿತ್ತು. ಆದರೆ ಬೆಳಗಿನಜಾವ ಮತ್ತೆ ಇದೇ ಹೊಲಕ್ಕೆ ದಾಳಿ ಮಾಡಿರುವ ಕಾಡಾನೆಗಳು ಗೋವಿನಜೋಳ ತಿಂದು, ತುಳಿದು, ಬಹಳಷ್ಟು ಅಡಕೆ ಗಿಡಗಳನ್ನು ನೆಲಕ್ಕುರುಳಿಸಿವೆ. ಅಲ್ಲದೆ, ಪೈಪುಗಳನ್ನೂ ನಾಶಪಡಿಸಿವೆ. ಸತತ ಮಳೆಯಿಂದಾಗಿ ಮಳೆಗಾಲದಲ್ಲಿ ಕೈಕೊಟ್ಟಿದ್ದ ಗೋವಿನಜೋಳದಿಂದ ಹಾನಿಗೊಳಗಾಗಿದ್ದೆವು. ಬೇಸಿಗೆ ಸಮಯದಲ್ಲಾದರೂ ಫಸಲು ಬೆಳೆಯೋಣವೆಂದರೆ ಕಾಡುಪ್ರಾಣಿಗಳ ಕಾಟ ತಪ್ಪುತ್ತಿಲ್ಲ. ಕಳೆದ ವರ್ಷವೂ ಇದೇ ಸಮಯದಲ್ಲಿ ಕಾಡಾನೆಗಳು ದಾಳಿ ಮಾಡಿ ಪೈರು ನಾಶಪಡಿಸಿದ್ದವು. ಪ್ರತಿವರ್ಷ ಇದೇ ಆದರೆ ರೈತರು ಇದಕ್ಕಾಗಿ ಮಾಡಿರುವ ಸಾಲವನ್ನು ತೀರಿಸುವುದಾದರೂ ಹೇಗೆ?. ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎನ್ನುತ್ತಾರೆ ಪ್ರತಾಪ್ ತಳವಾರ.
ಕಳೆದ ಐದು ದಿನಗಳಿಂದ ಮಾವಕೊಪ್ಪ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಹೂಡಿರುವ ಕಾಡಾನೆಗಳು ಪ್ರತಿದಿನ ಸಂಜೆಯಾಗುತ್ತಿದ್ದಂತೆ ಹೊಲ-ಗದ್ದೆ, ತೋಟಗಳಿಗೆ ದಾಳಿ ಮಾಡುತ್ತವೆ. ಪಕ್ಕದಲ್ಲಿರುವ ರವಿ ಬೆಲ್ಲದ ಎಂಬುವವರ ಅಡಕೆ ತೋಟಕ್ಕೆ ನುಗ್ಗಿ ತಂತಿ ಬೇಲಿ ಮುರಿದು, ಅಡಕೆ ಗಿಡಗಳನ್ನು ನೆಲಕ್ಕುರುಳಿಸಿವೆ. ಗೋವಿನಜೋಳ ಕೆಲ ದಿನಗಳಲ್ಲಿಯೇ ಕಟಾವಿಗೆ ಬರುತ್ತಿದ್ದವು. ಅವುಗಳನ್ನು ಕಾಡಾನೆಗಳು ತಿಂದು ಮುಗಿಸಿವೆ. ಫಸಲನ್ನು ಕಾಪಾಡಿಕೊಳ್ಳಲು ಹೊಲಕ್ಕೆ ತೆರಳಲೂ ಭಯವಾಗುತ್ತಿದೆ ಎಂದು ಪ್ರತಾಪ್ ತಳವಾರ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಳೆದ ತಿಂಗಳು ಪಾಳಾ ಅರಣ್ಯ ಪ್ರದೇಶದ ಮೂಲಕ ಕೊಪ್ಪರಸಿಕೊಪ್ಪ ಗ್ರಾಮದ ರೈತ ಶಿವಕುಮಾರ ದೊಡ್ಡಮನಿ ಎಂಬುವರ ಅಡಕೆ ತೋಟಗಳಿಗೆ ನಾಲ್ಕು ಕಾಡಾನೆಗಳ ಹಿಂಡು ದಾಳಿ ಮಾಡಿದ್ದವು. ಇದರ ಬೆನ್ನಲ್ಲೇ ಇದೀಗ ಮಾವಕೊಪ್ಪ ಅರಣ್ಯ ಪ್ರದೇಶದ ಮೂಲಕ ಹೊಲಗಳಿಗೆ ದಾಳಿ ಮಾಡುತ್ತಿರುವುದು ತಾಲೂಕಿನ ನೂರಾರು ರೈತರಲ್ಲಿ ಭಯ ಹುಟ್ಟಿಸಿದೆ.
ಮಾವಕೊಪ್ಪ ಗ್ರಾಮಕ್ಕೆ ಒಂದು ಮರಿ ಹಾಗೂ ಎರಡು ದೊಡ್ಡ ಕಾಡಾನೆಗಳು ಬಂದಿವೆ. ಸಣ್ಣ ಮರಿಯಾನೆ ಇರುವುದರಿಂದ ಅವುಗಳನ್ನು ಓಡಿಸುವುದು ಕಷ್ಟವಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಯಾವ ಭಾಗದಲ್ಲಿ ವಾಸ್ತವ್ಯ ಮಾಡಿವೆ ಎಂಬುದನ್ನು ಪತ್ತೆಹಚ್ಚಿ, ಮುಂಡಗೋಡ ಅರಣ್ಯ ಪ್ರದೇಶದತ್ತ ಹಿಂದಿರುಗಿಸಲಿದ್ದೇವೆ. ಇದಕ್ಕಾಗಿ 2-3 ತಂಡ ರಚಿಸಲಾಗಿದ್ದು, ಸಂಜೆ 4 ಗಂಟೆಯಿಂದ ಕಾರ್ಯಾಚರಣೆ ನಡೆಯುತ್ತದೆ. ರೈತರು, ಗ್ರಾಮಸ್ಥರು ಸಹಕರಿಸಬೇಕಿದೆ. ಗಿರೀಶ ಚೌಗಲೆ.ಆರ್‌ಎಫ್‌ಒ ಹಾನಗಲ್ಲ.