

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮಿತಿ ಮಿರಿದ್ದು, ಬೆಳಗವಳ್ಳಿ ಗ್ರಾಮದಲ್ಲಿ ಕಾಫಿ ಮತ್ತು ಅಡಕೆ ತೋಟಕ್ಕೆ ನುಗ್ಗಿರುವ 20ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ಬೆಳೆಯನ್ನೆಲ್ಲ ತಿಂದು, ಅಡಕೆ ಗಿಡಗಳನ್ನು ಕಿತ್ತೆಸೆದು ಬೆಳೆ ನಾಶ ಪಡಿಸಿವೆ.
ತಾಲೂಕಿನ ಮಲೆನಾಡು ಭಾಗದ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಅರೇಹಳ್ಳಿ ಹೋಬಳಿಯ ಸಾಕಷ್ಟು ಗ್ರಾಮಗಳ ತೋಟಗಳಿಗೆ ಹಿಂಡು ಹಿಂಡಾಗಿ ದಿನನಿತ್ಯ ನುಗ್ಗಿ ಬೆಳೆ ನಾಶ ಪಡಿಸುತ್ತಿವೆ. ಅಲ್ಲದೆ ಅರೇಹಳ್ಳಿ ಹೋಬಳಿಯ ಬೆಳಗವಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕಾಡಾನೆಗಳು ಮನಸ್ಸಿಗೆ ಬಂದ.ತೆ ನುಗ್ಗುತ್ತಿವೆ.
ಬೆಳಗವಳ್ಳಿ ಗ್ರಾಮದ ಬಿ.ಎಂ.ಅಶೋಕ್ ಮತ್ತು ಕೋಕಿಲಾ ಅಶೋಕ್ ಅವರ ಕಾಫಿ ತೋಟಕ್ಕೆ ಬುಧವಾರ ರಾತ್ರಿ ನುಗ್ಗಿರುವ 20 ಕ್ಕೂ ಹೆಚ್ಚಿನ ಕಾಡಾನೆಗಳು ಮಳೆಯ ನಡುವೆಯೇ ತೋಟದೊಳಗಿನ ಕಾಫಿ, ಅಡಕೆ, ಬಾಳೆ ಸೇರಿದಂತೆ ಇತರ ಬೆಳೆಗಳನ್ನೆಲ್ಲ ನಾಶ ಪಡಿಸಿವೆ. ಫಸಲು ಕೊಡುತ್ತಿದ್ದ ಸಾಕಷ್ಟು ಅಡಕೆ ಗಿಡಗಳನ್ನು ಬುಡ ಸಮೇತ ಕಿತ್ತು ಬಿಸಾಕಿವೆ. ಇಲ್ಲಿ ಕಳೆದ ಕೆಲ ದಿನಗಳಿಂದ ಬೀಡು ಬಿಟ್ಟಿರುವ 20 ಕ್ಕೂ ಹೆಚ್ಚಿನ ಕಾಡಾನೆಗಳು ಕೆಲ ಸಮಯ ಮನೆಗಳ ಸಮೀಪದಲ್ಲೆ ನಿಂತು ಆತಂಕ ಹುಟ್ಟಿಸುತ್ತಿವೆ.
ಆನೆಗಳ ಉಪಟಳಕ್ಕೆ ಬೇಸತ್ತ ರೈತರು, ಬೆಳೆಗಾರರು ತಾಲೂಕಿನಲ್ಲಿ ಬೀಡು ಬಿಟ್ಟು ಹಗಲು ರಾತ್ರಿ ಎನ್ನದೆ ಬೆಳೆ ನಾಶದೊಂದಿಗೆ ರೈತರಿಗೆ, ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ತಾಲೂಕಿನಿಂದಲೇ ಶಾಶ್ವತವಾಗಿ ಕಾಡಿಗಟ್ಟಲು ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದಲ್ಲಿ ಕೆಲವೇ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.