

ಸಿದ್ದಾಪುರ: ತಾಲೂಕಿನ ಶಿಗೇಹಳ್ಳಿ, ಕ್ವಾಡಗದ್ದೆ, ಕಲಗದ್ದೆ-ಬೆಳಗದ್ದೆಯ ಅಡಕೆ ತೋಟಕ್ಕೆ ಹಾಗೂ ಭತ್ತದ ಗದ್ದೆಗಳಿಗೆ ಐದು ಆನೆಗಳ ಹಿಂಡು ದಾಳಿ ನಡೆಸಿ ಬೆಳಗಳನ್ನು ನಾಶಪಡಿಸುತ್ತಿರುವುದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಶಿಗೇಹಳ್ಳಿ, ಕ್ವಾಡಗದ್ದೆ, ಕಲಗದ್ದೆ-ಬೆಳಗದ್ದೆಯ ಅಡಕೆತೋಟ, ಭತ್ತದ ಗದ್ದೆಗಳಲ್ಲಿ ರಾತ್ರಿ ಸಮಯದಲ್ಲಿ ಆನೆಗಳು ಕಾಣಿಸಿಕೊಳ್ಳುತ್ತಿವೆ.
ಭತ್ತದ ಗದ್ದೆಗಳಲ್ಲಿ ಮನಸೋ ಇಚ್ಛೆ ಓಡಾಡಿ ಬೆಳೆಗಳನ್ನು ನಾಶ ಪಡಿಸಿವೆ. ಅಡಕೆ ತೋಟದಲ್ಲಿ ಸಸಿ-ಗಿಡ, ಬಾಳೆ ಮರಗಳನ್ನು ನಾಶಪಡಿಸಿವೆ. ಇದರಿಂದ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ರೈತರಾದ ರವೀಂದ್ರ ಆರ್.ಹೆಗಡೆ, ವಿಶ್ವೇಶ್ವರ ಜಿ.ಹೆಗಡೆ, ಪರಮೆಶ್ವರ ಹೆಗಡೆ, ರಮಾಕಾಂತ ಹೆಗಡೆ, ಗಿರೀಶ ಹೆಗಡೆ, ರಾಜು ಹೆಗಡೆ, ಆನಂದ ಹೆಗಡೆ, ಮಂಜುನಾಥ ಹೆಗಡೆ ಅಸಹಾಯಕತೆ ವ್ಯಕ್ತಪಡಿಸಿದರು.
ಆನೆಗಳ ಹಿಂಡನ್ನು ಊರಿನವರು ಹಾಗೂ ಅರಣ್ಯ ಇಲಾಖೆಯವರು ಕೂಗಿ, ಪಟಾಕಿ ಸಿಡಿಸಿ ಹಾಗೂ ಜಾಗಟೆ ಬಾರಿಸಿ ಸಮೀಪದ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆನೆಗಳ ಹಿಂಡು ಮಂಚಿಕೇರಿ, ಬನವಾಸಿ, ಮಳಲಗಾಂವ, ಉಂಚಳ್ಳಿ, ಕೊಪ್ಪ ಮಾರ್ಗವಾಗಿ ಶಿಗೇಹಳ್ಳಿ, ಕ್ವಾಡಗದ್ದೆ, ಕಲಗದ್ದೆ ಹಾಗೂ ತ್ಯಾಗಲಿಯವರೆಗ ಪ್ರತಿ ಮೂರ್ನಾಲ್ಕು ವರ್ಷಕ್ಕೊಮ್ಮೆ ಬರುತ್ತಿತ್ತು. ಬರುವಾಗ ಮಾರ್ಗದಲ್ಲಿನ ತೋಟ, ಗದ್ದೆಗಳನ್ನು ನಾಶಪಡಿಸುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ.
ಆನೆಗಳನ್ನು ಓಡಿಸುವಾಗ ಎಚ್ಚರ ವಹಿಸುವುದು ಮುಖ್ಯ. ಪಟಾಕಿ ಸಿಡಿಸಿ, ಜೋರಾಗಿ ಕೂಗಿದರೆ ದಿಕ್ಕು ತಪ್ಪಿ ಓಡಬಹುದು. ಇದರಿಂದ ಮತ್ತಷ್ಟು ತೊಂದರೆಯಾಗುತ್ತದೆ. ಅವು ಬಂದ ದಾರಿಯಲ್ಲೇ ಹಿಂದಿರುಗುವಂತೆ ಓಡಿಸುವುದು ಮುಖ್ಯ. ಜನ ಆತಂಕ ಪಡುವುದು ಬೇಡ. ನಿಮ್ಮೊಂದಿಗೆ ಅರಣ್ಯ ಇಲಾಖೆ ಇದೆ. ಆನೆ ದಾಳಿಯಿಂದ ಬೆಳೆ ಹಾನಿಗೆ ಪರಿಹಾರ ನೀಡಲಾಗುತ್ತದೆ. ಹಾನಿಗೊಳಗಾದ ಬೆಳೆಗಾರರು ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಗಿರೀಶ ನಾಯ್ಕ, ಆರ್‌ಎಫ್‌ಒ ಶಿರಸಿ.