

ಶಿಗ್ಗಾಂವಿ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿರುವ 8 ಆನೆಗಳ ಹಿಂಡು ತಾಲೂಕಿನ ನಾಗನೂರ ಕೆರೆಯಲ್ಲಿ ಕಾಣಿಸಿಕೊಂಡಿದ್ದು, ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ನಾಗನೂರ ಕೆರೆಯ ನೀರಿನಲ್ಲಿ ಆನೆಗಳ ಹಿಂಡು ಆರಾಮವಾಗಿ ಈಜಾಡಿಕೊಂಡು ನಂತರ ರಸ್ತೆಯ ಅಕ್ಕಪಕ್ಕದಲ್ಲಿ ಬೀಡು ಬಿಟ್ಟಿವೆ. ಭಾನುವಾರ ಬೆಳಗಿನ ಜಾವ ರಸ್ತೆಯಲ್ಲಿ ಹೋಗುತ್ತಿದ್ದ ಗ್ರಾಮಸ್ಥರಿಗೆ ಆನೆಗಳು ಕಂಡಿವೆ. ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ. ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಆನೆಗಳು ಕೆರೆಯ ಸುತ್ತಲಿನ ಪ್ರದೇಶಗಳಲ್ಲಿ ಉಳಿದುಕೊಂಡಿದ್ದು, ಕೂಡಲೇ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರತಿ ವರ್ಷ ಈ ಸಮಯದಲ್ಲಿ ಆನೆಗಳು ಬರುವುದು ಸಹಜ. 15 ದಿನಗಳ ಕಾಲ ಆನೆಗಳು ಸುತ್ತಲಿನ ಪ್ರದೇಶದಲ್ಲಿ ಇರಲಿವೆ. ನಂತರ ಅರಣ್ಯ ಪ್ರದೇಶಕ್ಕೆ ತೆರಳುತ್ತವೆ. ಆದ್ದರಿಂದ ನಾಗನೂರ ಸೇರಿ ಸುತ್ತಲಿನ ಗ್ರಾಮಗಳ ರೈತರು ಜಾಗೃತಿಯಿಂದ ಇರಬೇಕು. ರಾತ್ರಿ ಸಮಯದಲ್ಲಿ ಜಮೀನುಗಳ ಕಡೆ ಹೋಗಬಾರದು. ಆನೆಗಳು ಗ್ರಾಮದ ಹತ್ತಿರ ಕಂಡುಬಂದರೆ ಅರಣ್ಯ ಇಲಾಖೆಗೆ ತಿಳಿಸಬೇಕು. *ರವಿಕುಮಾರ ಪುರಾಣಿಕಮಠ, ಅರಣ್ಯಾಧಿಕಾರಿ, ದುಂಡಶಿ