

ಗಜೇಂದ್ರಗಡ: ಪಟ್ಟಣದ 3ನೇ ವಾರ್ಡ್‌ನಲ್ಲಿ ನಿರ್ಗತಿಕರಾಗಿ ಶೌಚಗೃಹದಲ್ಲಿ ವಾಸವಾಗಿದ್ದ ಸುಬ್ಬಣ್ಣ ಅಮಟೆ (ಮಾಂಡ್ರೆ) ದಂಪತಿಗೆ ನೆರವು ಹರಿದು ಬಂದಿದೆ.
ಪುರಸಭೆಯ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಶೌಚಗೃಹದಲ್ಲಿ ವಾಸವಿದ್ದ ದಂಪತಿಯನ್ನು ಬಸವೇಶ್ವರ ರಂಗಮಂದಿರಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಿದ್ದಾರೆ. 3-4 ದಿನದಲ್ಲಿ ಸರ್ಕಾರದ ನಿವೇಶನ ನೋಡಿ ಅವರಿಗೆ ಶೆಡ್ ನಿರ್ಮಿಸಿಕೊಡಲಾಗುವುದು. ಕೆಲ ದಿನಗಳವರೆಗೆ ತಾತ್ಕಾಲಿಕ ವ್ಯವಸ್ಥೆಗೆ ಅನುಕೂಲ ಮಾಡಿಕೊಡಲಾಗುವುದು. ನಂತರ ಸರ್ಕಾರದ ಪಿಎಂ ಆವಾಸ್ ಯೋಜನೆಯಡಿ ವಸತಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.
ಧರ್ಮಸ್ಥಳ ಸ್ವ ಸಹಾಯ ಸಂಘದ ರೋಣ ತಾಲೂಕು ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ ಭೇಟಿ ನೀಡಿ ದಂಪತಿಗೆ ಪ್ರತಿ ತಿಂಗಳು 1000 ರೂ. ಮಾಸಾಶನದ ಜತೆಗೆ ವಾತ್ಸಲ್ಯ ಕಿಟ್ ನೀಡಲಾಗುವುದು. ಪುರಸಭೆಯವರು ನಿವೇಶನ ಮಂಜೂರು ಮಾಡಿದರೆ ಧರ್ಮಸ್ಥಳ ಸಂಘದಿಂದ ಮನೆ ನಿರ್ಮಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.