ಧಾರಾಕಾರ ಮಳೆ: ಬೆಂಗಳೂರು-ಮೈಸೂರು ರಸ್ತೆಯಲ್ಲಿ ಟ್ರಾಫಿಕ್​​, ಬಿಇ ಪರೀಕ್ಷೆ ಮುಂದೂಡಿಕೆ

rain mysore banglore road trafic
Published on

ಬೆಂಗಳೂರು: ಬೆಂಗಳೂರು, ಮಂಡ್ಯ, ರಾಮನಗರದಲ್ಲಿ ಶುಕ್ರವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರು-ಮೈಸೂರು ರಸ್ತೆಯ ತಗ್ಗುಪದೇಶದಲ್ಲಿ ನೀರು ನಿಂತಿದ್ದು, ಶನಿವಾರ ಬೆಳ್ಳಂಬೆಳಗ್ಗೆ ಕಿಲೋ ಮೀಟರ್​ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರು ಟ್ರಾಫಿಕ್ ಕಿರಿಕಿರಿ ಅನುಭವಿಸಿದ್ದಾರೆ. ಇನ್ನು ಟ್ರಾಫಿಕ್​ ಸಮಸ್ಯೆ ಇದ್ದ ಕಾರಣಕ್ಕೆ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಪರೀಕ್ಷೆಯನ್ನು ಮುಂದೂಡಲಾಗಿದೆ.

ರಸ್ತೆಗಳ ಮೇಲೆ 2-3 ಅಡಿ ನೀರು ನಿಂತ್ತಿದ್ದ ಪರಿಣಾಮ ವಾಹನ ಸವಾರರು ಪರದಾಡಿದರು. ಕೆಲ ವೃತ್ತಗಳಲ್ಲಿ ವಾಹನಗಳು ಮುಂದಕ್ಕೆ ಹೋಗಲು ಸಾಧ್ಯವಾಗದೆ ಸವಾರರು ಹೈರಾಣಾದರು. ಕೆಲಸ ಮುಗಿಸಿ ಮನೆಗೆ ಹೋಗುವ ಧಾವಂತದಲ್ಲಿದ್ದ ಜನರು ಶುಕ್ರವಾರ ಸಂಕಷ್ಟ ಅನುಭವಿಸಿದ್ದು ಮಾತ್ರವಲ್ಲ, ಶನಿವಾರ ಬೆಳಗ್ಗೆ ಕೆಲಸಕ್ಕೆ, ಶಾಲಾ-ಕಾಲೇಜಿಗೆ ತೆರಳುವವರ ಪರಿಸ್ಥಿಯೂ ಇದೇ ಆಗಿತ್ತು.

ಚನ್ನಪಟ್ಟಣದ ಶೇರ್ವಾ ಸರ್ಕಲ್ ಬಳಿ ರಸ್ತೆ ಬಿರುಕು ಬಿಟ್ಟಿದ್ದು, ಡಕ್ ಕುಸಿಯುವ ಹಂತದಲ್ಲಿದೆ. ಕೆರೆ ಕೋಡಿ ಬಿದ್ದ ಪರಿಣಾಮ ಡಕ್​ ಶಿಥಿಲಗೊಂಡಿದ್ದು, ಅಪಾಯವನ್ನೂ ಲೆಕ್ಕಿಸದೆ ವಾಹನಗಳು ಸಂಚರಿಸುತ್ತಿವೆ. ಚನ್ನಪಟ್ಟಣ ನಗರ ಪ್ರದೇಶದಲ್ಲಿರುವ ಕುಡಿನೀರು ಕಟ್ಟೆ ತುಂಬಿ ಹರಿಯುತ್ತಿದ್ದು, ಬೀಡಿ ಕಾಲನಿ ಸಂಪೂರ್ಣ ಜಲಾವೃತಗೊಂಡಿದೆ.

ವರುಣಾರ್ಭಟಕ್ಕೆ ಮಂಡ್ಯ ತಾಲೂಕಿನ ದೊಡ್ಡಗರುಡನಹಳ್ಳಿಯಲ್ಲಿ ಕೆರೆ ಮತ್ತು ನಾಲೆ ಏರಿ ಹೊಡೆದು ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ. ಕೆರೆಗೆ ಹೊಂದಿಕೊಂಡಂತೆ ವಿಶ್ವೇಶ್ವರಯ್ಯ ನಾಲೆಯಿದೆ. ದೊಡ್ಡಗರುಡನಹಳ್ಳಿ-ಶಿವಳ್ಳಿ ನಡುವೆ ಸಂಚಾರ ಸ್ಥಗಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net