ಕಾಮಗಾರಿ ಬದಲಾವಣೆಗೆ ಕಾವೇರಿದ ಚರ್ಚೆ

A heated discussion about changing jobs
ರನ್ನಬೆಳಗಲಿ ಪಪಂ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯ ಪ್ರವೀಣ ಪಾಟೀಲ ಕಾಮಗಾರಿಗಳ ಮುಗಿದ ಮತ್ತು ಪ್ರಗತಿ ಹಂತದ ಕಾಮಗಾರಿಗಳ ಛಾಯಾಚಿತ್ರ ಪ್ರದರ್ಶಿಸಿದರು. ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ, ಉಪಾಧ್ಯಕ್ಷೆ ಸಹನಾ ಸಾಂಗಲಿಕರ, ಮುಖ್ಯಾಧಿಕಾರಿ ಎನ್.ಎ. ಲಮಾಣಿ ಇದ್ದರು.
Published on

ಮಹಾಲಿಂಗಪುರ: ರನ್ನಬೆಳಗಲಿ ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಪಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2024-25ನೇ ಸಾಲಿನ ಎಸ್ಎಫ್​ಸಿ ​ ಅನುದಾನದಲ್ಲಿ 15 ಕಾಮಗಾರಿ ಹಾಗೂ 15ನೇ ಹಣಕಾಸಿನಲ್ಲಿ 5 ಕಾಮಗಾರಿಗಳ ಬದಲಾವಣೆ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಕೆಲ ಹೊತ್ತು ಕಾವೇರಿದ ಚರ್ಚೆ ನಡೆಯಿತು.

ವಿಪಕ್ಷ ಸದಸ್ಯ ಪ್ರವೀಣ ಪಾಟೀಲ ಕಾಮಗಾರಿಗಳ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದರು. ಆಡಳಿತಾಧಿಕಾರಿಗಳ ಅವಧಿಯಲ್ಲಿ ಕಾಮಗಾರಿಗಳು ಮಂಜೂರಾಗಿ ಕಾರ್ಯಾದೇಶ ಪತ್ರ ವಿತರಿಸಲಾಗಿದೆ. ಇದರಲ್ಲಿ ಕೆಲವು ಪೂರ್ಣಗೊಂಡು ಬಿಲ್ ಹಂತಕ್ಕೆ ಬಂದಿವೆ. ಕೆಲವು ಪ್ರಗತಿಯಲ್ಲಿವೆ. ಹೀಗಿರುವಾಗ ಕಾಮಗಾರಿಗಳನ್ನು ಬದಲಾವಣೆ ಹೇಗೆ ಮಾಡುತ್ತೀರಿ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಪೂರ್ಣಗೊಂಡಿರುವ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳ ಭಾವಚಿತ್ರಗಳನ್ನು ಸಭೆಯಲ್ಲಿ ಪ್ರದರ್ಶಿಸಿದರು. ಕಾಮಗಾರಿ ಬದಲಾವಣೆ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ತಿರಸ್ಕರಿಸಿದ್ದಾರೆ. ಅಧಿಕಾರ ಇದೆ ಎಂಬ ಕಾರಣಕ್ಕೆ ಆಗಿರುವ ಕಾಮಗಾರಿಗಳನ್ನು ಬದಲಾವಣೆ ಪಟ್ಟಿಗೆ ಸೇರಿಸಿದರೆ ಗುತ್ತಿಗೆದಾರರ ಪರಿಸ್ಥಿತಿ ಏನಾಗಬೇಡ ? ಪಟ್ಟಣದ ಅಭಿವೃದ್ಧಿ ಕೆಲಸಗಳಿಗೆ ಆಡಳಿತ ಮಂಡಳಿಯವರು ವಿರೋಧಿಸುತ್ತಿರುವುದನ್ನು ಖಂಡಿಸುತ್ತೇನೆ ಎಂದರು.

ಸ್ಥಾಯಿ ಸಮಿತಿ ಚೇರ್ಮನ್ ಪ್ರವೀಣ ಭರಮನಿ ಮಾತನಾಡಿ, ನಮ್ಮ ಸದಸ್ಯರ ಗಮನಕ್ಕೆ ತಾರದೆ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಪಪಂನಲ್ಲಿ ನಮ್ಮ ಅಧಿಕಾರ ಇರುವುದರಿಂದ ಕಾಮಗಾರಿಗಳ ಬದಲಾವಣೆ ಪಟ್ಟಿ ನೀಡಿದ್ದೇವೆ. ನಮ್ಮ ಅಧ್ಯಕ್ಷ-ಉಪಾಧ್ಯಕ್ಷರು ಮತ್ತು ಸದಸ್ಯರ ಒಪ್ಪಿಗೆಯಂತೆ ಕಾಮಗಾರಿಗಳ ಬದಲಾವಣೆಗೆ ಠರಾವು ಪಾಸ್ ಮಾಡಬೇಕು. ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದನ್ನು ಠರಾವಿನಲ್ಲಿ ನಮೂದಿಸಿ ಎಂದ ಅವರು, ಡಿಸಿಯವರಿಂದ ಬದಲಾವಣೆ ಕಾಮಗಾರಿಗಳ ಪಟ್ಟಿ ತಿರಸ್ಕೃತವಾಗಿ ಬಂದಿರುವ ವಿಷಯ ನಮ್ಮ ಸದಸ್ಯರ ಗಮನಕ್ಕೆ ತಂದಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಪಂ ಆಡಳಿತಾಧಿಕಾರಿಗಳ ಅವಧಿಯಲ್ಲಾದ 4 ಕಾಮಗಾರಿಗಳ ಒಟ್ಟು 6 ಲಕ್ಷ ಬಿಲ್ ಪಾವತಿಗೆ ಆಡಳಿತ ಪಕ್ಷದ ಸದಸ್ಯರು ಮೂರನೇ ಸಭೆಯಲ್ಲಿಯೂ ವಿರೋಧ ವ್ಯಕ್ತಪಡಿಸಿದರು. ಇತ್ತ ವಿಪಕ್ಷ ಸದಸ್ಯರು ಆಡಳಿತಾಧಿಕಾರಿಗಳಿಗೆ ಬೆಲೆ ಇಲ್ಲವೆ? ಅವರ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ನಡೆದ ಕಾಮಗಾರಿಗಳ ಬಿಲ್‌ಗೆ ತಡೆ ನೀಡುವುದು ಯಾವ ನ್ಯಾಯ? ಕೆಲಸ ಮಾಡಿದ ಗುತ್ತಿಗೆದಾರರ ಗತಿ ಏನು? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ತಮ್ಮ ಪಕ್ಷದ ಸರ್ಕಾರವಿರುವ ಕಾರಣ ವಿಪಕ್ಷ ಕಾಂಗ್ರೆಸ್ ಸದಸ್ಯರು, ಸ್ಥಳೀಯ ಅಧಿಕಾರ ಹೊಂದಿದ ಬಿಜೆಪಿ ಸದಸ್ಯರು ತಮ್ಮ ನಿಲುವು ಪ್ರದರ್ಶಿಸಿದರು. ಇದು ಠರಾವು ಆಗಬೇಕು, ಇದಕ್ಕೆ ನಮ್ಮ ವಿರೋಧ ಎಂಬ ಎರಡು ಪಕ್ಷಗಳ ಸದಸ್ಯರ ಹೇಳಿಕೆಗಳಿಗೆ ತಬ್ಬಿಬ್ಬಾದ ಅಧಿಕಾರಿಗಳು, ಯಾವ ವಿಷಯಕ್ಕೆ ಠರಾವು ಪಾಸ್, ಯಾವುದಕ್ಕೆ ತಡೆ ಎಂಬ ಗೊಂದಲದಲ್ಲಿ ಅಸಹಾಯಕರಾಗಿ ಎರಡು ಪಕ್ಷಗಳ ಸದಸ್ಯರಿಗೆ ಕಾಮಗಾರಿಗಳ ಸಮಗ್ರ ಮಾಹಿತಿ ನೀಡುವುದರಲ್ಲೇ ಹೈರಾಣಾದರು.

ಪಪಂ ಮುಖ್ಯಾಧಿಕಾರಿ ಎನ್.ಎ. ಲಮಾಣಿ, ಉಪಾಧ್ಯಕ್ಷೆ ಸಹನಾ ಸಾಂಗಲಿಕರ, ಆಡಳಿತ ಪಕ್ಷದ ಕಾಶವ್ವ ಪುರಾಣಿಕ, ದ್ರಾಕ್ಷಾಯಿಣಿ ಮುರನಾಳ, ಸಾವಿತ್ರಿ ರಾಮದುರ್ಗ, ಸದಾಶಿವ ಸಂಕ್ರಟ್ಟಿ, ಕರೆಪ್ಪ ಕುಂಬಾಳಿ, ಭೀಮಸಿ ಹೊಸಮನಿ, ವಿಪಕ್ಷದ ನೀಲಕಂಠ ಸೈದಾಪೂರ, ಮುತ್ತು ಸಣ್ಣಟ್ಟಿ, ಮುತ್ತು ನಾಯಕ, ಮುಬಾರಕ ಅತ್ತಾರ, ಅನಿತಾ ಮಲಾವಡಿ, ಗೌರವ್ವ ಅಮಾತಿ, ಪಪಂ ಅಧಿಕಾರಿಗಳು ಇದ್ದರು.

ಸದಸ್ಯರು ಪರ, ವಿರೋಧ ಮಾಡಿದರೆ ಅಧಿಕಾರಿಗಳು ಕಾನೂನು ಪ್ರಕಾರ ಏನು ಮಾಡಲು ಸಾಧ್ಯ? ಅದನ್ನು ಠರಾವಿನಲ್ಲಿ ಬರೆದು ನಿಗದಿತ ವೇಳೆಗೆ ಸಭೆ ಮುಗಿಸಬೇಕು. ಸರ್ಕಾರವಿರುವ ವಿಪಕ್ಷ ಸದಸ್ಯರು ತಮ್ಮ ವಾರ್ಡಿನಲ್ಲಿ ಹೆಚ್ಚು ಕೆಲಸಗಳನ್ನು ಹಾಕಿಕೊಂಡ ಕಾರಣ ಆಡಳಿತ ಪಕ್ಷದ ನಮ್ಮ ಸದಸ್ಯರು ಕಾಮಗಾರಿ ಬದಲಾವಣೆಗೆ ಒತ್ತಾಯಿಸುತ್ತಿದ್ದೇವೆ. ಅಧಿಕಾರಿಗಳು ಈ ರೀತಿ ಚರ್ಚೆಗೆ ಅವಕಾಶ ನೀಡಿದರೆ ರಾತ್ರಿ ಹಗಲು ಆದರೂ ಸಭೆ ಮುಗಿಯಲ್ಲ. ಅಧಿಕಾರಿಗಳು ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರಿಗೆ ಸಮಾನ ಆದ್ಯತೆ ನೀಡಿ ಕಾನೂನು ಅಡಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು. -ಸಿದ್ದುಗೌಡ ಪಾಟೀಲ, ಪಪಂ ಸದಸ್ಯ, ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net