ದಸರಾ ಆನೆಗಳಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

Dussehra elephant
ಶಿವಮೊಗ್ಗದಲ್ಲಿ ವಾಸವಿ ಶಾಲಾ ಆವರಣದಲ್ಲಿ ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಂಡ ಆನೆಯನ್ನು ಲಾರಿಯಲ್ಲಿ ಸಕ್ರೆಬೈಲ್‌ಗೆ ಕರೆದೊಯ್ಯಲಾಯಿತು.
Published on

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಇದೇ ಮೊದಲ ಬಾರಿಗೆ ಚುನಾಯಿತ ಪ್ರತಿನಿಧಿ(ಕಾರ್ಪೊರೇಟರ್)ಗಳು ಇಲ್ಲದೆ, ಜತೆಗೆ ಕುಮ್ಕಿ(ಹೆಣ್ಣಾನೆ) ಆನೆಗಳಿಲ್ಲದೆ ನಾಡಹಬ್ಬ ಶಿವಮೊಗ್ಗ ದಸರಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದು ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಂಡ ಆನೆಗಳಿಗೆ ಭಾನುವಾರ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.

ನಗರದ ವಾಸವಿ ಶಾಲಾ ಆವರಣದಲ್ಲಿ ಚಾಮುಂಡೇಶ್ವರಿಯ ಬೆಳ್ಳಿ ಮಂಟಪ ಹೊತ್ತ ಸಾಗರ, ಆತನಿಗೆ ಹಿಂಬದಿಯಲ್ಲಿ ಸಾಥ್ ನೀಡಿದ ಬಾಲಣ್ಣ, ಬಹದ್ದೂರ್ ಆನೆಗಳು ಮತ್ತು ಸಜಕ್ರೆಬೈಲ್‌ನ ಅರಣ್ಯಾಧಿಕಾರಿಗಳು, ಸಿಬ್ಬಂದಿಯನ್ನು ಮಹಾನಗರ ಪಾಲಿಕೆಯಿಂದ ಸನ್ಮಾನಿಸುವ ಮೂಲಕ ಗೌರವ ಸಮರ್ಪಣೆ ಸಲ್ಲಿಸಲಾಯಿತು.
ಇದೇ ಮೊದಲ ಬಾರಿಗೆ ಪಾಲಿಕೆ ಅಧಿಕಾರಿಗಳೇ ದಸರಾ ಮಹೋತ್ಸವದ ಜವಾಬ್ದಾರಿ ಹೊತ್ತು ಸುಸೂತ್ರವಾಗಿ ನೆರವೇರಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ನೇತೃತ್ವದಲ್ಲಿ ಇಡೀ ಪಾಲಿಕೆ ಅಧಿಕಾರಿಗಳು ಒಂಬತ್ತು ದಿನವೂ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಾಕರ್ಷಣೆಗೊಳ್ಳುವಂತೆ ಮಾಡಿದರು.
ಅದರಲ್ಲೂ ಹೆಣ್ಣಾನೆಗಳೇ ಇಲ್ಲದೇ ಜಂಬೂ ಸವಾರಿ ನಡೆಯುವುದೇ ಅನುಮಾನ ಎಂಬಂತಿದ್ದ ವೇಳೆ ಮೂರು ಗಂಡಾನೆಗಳಿಗೆ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ನೇತೃತ್ವದಲ್ಲಿ ತಾಲೀಮು ನಡೆಸಿ ಅಂಬಾರಿ ಹೋರಿವಂತೆ ಮಾಡಿ ಜನರಿಂದ ಪ್ರಶಂಸೆಗೆ ಒಳಗಾದರು.
ಶನಿವಾರ ವಿಜಯದಶಮಿ ಅಂಬುಛೇದನ, ರಾವಣ ದಹನದೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಂಡಿದ್ದು ಸಾರ್ವಜನಿಕರಿಗೆ ಖುಷಿ ಕೊಟ್ಟಿತು. ರಾಜಬೀದಿ ಉತ್ಸವ ಸಮಿತಿ ಸಂಪೂರ್ಣ ಜವಾಬ್ದಾರಿ ಹೊತ್ತ ಸಮಿತಿ ಕಾರ್ಯದರ್ಶಿ ಸುಧೀರ್ ಕೆ ಆಚಾರ್ಯ ಕೂಡ ನಾಗರಿಕರ ಪ್ರಶಂಸೆಗೆ ಪಾತ್ರರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net