

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಮಾಳಮಡ್ಡಿಯಲ್ಲಿ ವೀರ ಸಾವರಕರ ಬಳಗದ ವತಿಯಿಂದ ಸ್ಟೇಶನ್ ರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸೋಮವಾರ ಸಂಭ್ರಮದಿಂದ ನಡೆಯಿತು.
ಮೂರು ದಿನಗಳ ಕಾಲ ಪೂಜಿಸಲ್ಪಟ್ಟ ಗಣೇಶ ಮೂತಿರ್ಯನ್ನು ಡಿಜೆ ಅಬ್ಬರವಿಲ್ಲದೆ ಅಪ್ಪಟ ದೇಸಿ ವಾದ್ಯ ಮೇಳಗಳೊಂದಿಗೆ ಬೀಳ್ಕೊಡಲಾಯಿತು. ಸೋಮವಾರ ಬೆಳಗ್ಗೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ಜತೆಗೆ ಗಣಹೋಮ ನೆರವೇರಿಸಲಾಯಿತು.
ಸಂಜೆ 6 ಗಂಟೆಗೆ ಮಹಾಮಂಗಳಾರತಿ ನಂತರ ವಿವೇಕಾನಂದ ಯೂತ್ ಮೂವವೆಂಟ್ನ ಮುಖ್ಯಸ್ಥ ಜಯಂತ ಕೆ.ಎಸ್., ಡಾ. ಗೋಪಾಲಕೃಷ್ಣ ಕಮಲಾಪುರ ಇತರರು ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮಾಳಮಡ್ಡಿ, ಎಮ್ಮಿಕೇರಿ, ಕೋರ್ಟ್ ವೃತ್ತ, ಲೈನ್ಬಜಾರ್, ವನಿತಾ ಸೇವಾ ಸಮಾಜ, ಹೊಸಯಲ್ಲಾಪುರ ಮುಖ್ಯ ರಸ್ತೆ ಮಾರ್ಗವಾಗಿ ನುಚ್ಚಂಬ್ಲಿ ಬಾವಿಗೆ ತೆರಳಿ ವಿಸರ್ಜನೆ ಮಾಡಲಾಯಿತು.
ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಬೆಳಗಾವಿಯಿಂದ ಆಗಮಿಸಿದ್ದ ಡೋಲ್ ತಾಷಾ ತಂಡ ಗಮನ ಸೆಳೆಯಿತು. ಮೆರವಣಿಗೆ ಆರಂಭವಾಗುತ್ತಿದ್ದಂತೆ ಮಳೆ ಆರಂಭವಾದರೂ ಜನರು ಮಾತ್ರ ದೂರ ಸರಿಯದೆ ಮಳೆಯಲ್ಲೇ ಡೋಲ್ ಸದ್ದು ಕೇಳಿ ಆನಂದಿಸಿದ್ದಲ್ಲದೆ, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಪ್ರತಿಷ್ಠಾಪನೆ ದಿನವಾದ ಶನಿವಾರ ಸಂಜೆ ಪ್ರಶಾಂತ ದೀತ ಹಾಗೂ ತಂಡದಿಂದ ದಾಸವಾಣಿ ಸಂಗೀತ, ಹಾಸ್ಯ ಕಲಾವಿದ ರಾವೇಂದ್ರ ಆಚಾರ ಅವರಿಂದ ಹಾಸ್ಯ ಸಂಜೆ ಜರುಗಿದರೆ, ಎರಡನೇ ದಿನವಾದ ಶನಿವಾರ ಗಣಪತಿ ಪೂಜೆ, ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ ಹಾಗೂ ಕಲಕೇರಿ ಸಂಗೀತ ಶಾಲೆ ವಿದ್ಯಾಥಿರ್ಗಳು ಸಂಗೀತ ಪ್ರಸ್ತುತಪಡಿಸಿದರು.