ಮಕ್ಕಳನ್ನು ಉತ್ತಮರಾಗಿ ಬೆಳೆಸಿದರೆ ಸ್ವಸ್ಥ ಸಮಾಜ ನಿರ್ಮಾಣ

18ark3
Published on

ಅರಕಲಗೂಡು: ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಜತೆಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಬೆಳೆಸಿದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕೊಣನೂರು ಬಿ.ಎಂ.ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ಮಹೇಶ್ ಅಭಿಪ್ರಾಯಪಟ್ಟರು.


ಪಟ್ಟಣದ ದೇವರಾಜ ಅರಸು ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮಂಗಳವಾರ ಏರ್ಪಡಿಸಿದ್ದ ವಿಶ್ವಕರ್ಮ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಜನಾಂಗ ರಾಜ್ಯದಲ್ಲಿ 15 ಲಕ್ಷ ಜನಸಂಖ್ಯೆ ಹೊಂದಿದ್ದು, 41 ಉಪ ಜಾತಿಗಳನ್ನು ಒಳಗೊಂಡಿದೆ. ಇಷ್ಟು ಜನಸಂಖ್ಯೆ ಇದ್ದರೂ ಸಮಾಜದಲ್ಲಿ ಶೋಷಣೆಗೆ ಒಳಗಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಸಬಲೀಕರಣವಾಗಲು ಸಾಧ್ಯವಾಗಿಲ್ಲ. ವಿಶ್ವಕರ್ಮ ಸಮಾಜದವರು ತಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಸಬಲೀಕರಣಗೊಳಿಸಿ ಉನ್ನತ ಹುದ್ದೆಗಳನ್ನು ಪಡೆಯುವಂತಾಗಬೇಕು ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಸೀಲ್ದಾರ್ ಸೌಮ್ಯಾ ಮಾತನಾಡಿ ವಿಶ್ವಕರ್ಮ ಸಮುದಾಯ ಸಮಾಜಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ. ನಿಮ್ಮ ಕುಲಕಸುಬು ಸಮಾಜಕ್ಕೆ ಸಿಗದೆ ಹೋಗಿದ್ದರೆ ಆಕರ್ಷಕ ಸಮಾಜ ನೋಡಲು ಸಾಧ್ಯವಾಗುತ್ತಿರಲಿಲ್ಲ. ಮನುಕುಲ ವಿಶ್ವಕರ್ಮ ಸಮಾಜದ ಕೊಡುಗೆಯನ್ನು ಸ್ಮರಿಸಬೇಕು ಎಂದರು.


ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟು ಕೊಣನೂರಿನ ಕೆ.ಇ.ನಂದಿತಾ ಹಾಗೂ ವಿಶ್ವಕರ್ಮ ಸಮುದಾಯದ ಹಿರಿಯ ಕುಶಲ ಕರ್ಮಿ ನಾಗರಾಜಾಚಾರ್ ಅವರನ್ನು ಗೌರವಿಸಲಾಯಿತು.


ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಸ್.ಎಸ್.ಪ್ರದೀಪ್ ಕುಮಾರ್, ತಾಪಂ ಇಒ ಪ್ರಕಾಶ್, ಪಪಂ ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ, ಸಿಡಿಪಿಒ ವೆಂಕಟೇಶ್, ಬಿಇಒ ನಾರಾಯಣ್, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಯೋಗಾಚಾರ್, ಕಾರ್ಯದರ್ಶಿ ಕೆ.ಎಸ್.ಯೋಗೇಶ್, ಸಹಕಾರ್ಯದರ್ಶಿ ಪ್ರವೀಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ಎಂ.ಸಿ.ಮಂಜುನಾಥ್, ಖಜಾಂಚಿ ಚರಣ್, ಉಮಾಮಹೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಬಿ.ಕೃಷ್ಣ ಉಪಸ್ಥಿತರಿದ್ದರು.


ಕಾರ್ಯಕ್ರಮಕ್ಕೂ ಮೊದಲು ಬೆಳ್ಳಿ ರಥದಲ್ಲಿ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net