

ಮಂಗಳೂರು: ಮಾದಕ ದ್ರವ್ಯ ವ್ಯಸನ ಮುಕ್ತರಾದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಬಹುತೇಕ ಆರೋಪಿಗಳು ಮಾದಕ ವ್ಯಸನಿಗಳಾಗಿರುವುದು ತನಿಖೆಯಿಂದ ಬಯಲಾಗುತ್ತದೆ. ಯುವ ಜನತೆ ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಎನ್‌ಐಟಿಕೆ ಸುರತ್ಕಲ್‌ನ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ.ಎ.ಸಿ.ಹೆಗ್ಡೆ ಹೇಳಿದರು.
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನಾಚರಣೆಯ ಅಂಗವಾಗಿ ಮಾದಕ ದ್ರವ್ಯ ಮುಕ್ತ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕವಸ್ತು ಸಮಸ್ಯೆಗಳು ಜಾಗತಿಕ ಪರಿಣಾಮ ಬೀರುತ್ತಿದೆ. ವ್ಯಸನದ ವಿರುದ್ಧ ಹೋರಾಡುತ್ತಿರುವ ವ್ಯಕ್ತಿಗಳು ಮತ್ತು ಮಾದಕವಸ್ತು ಕಳ್ಳಸಾಗಣೆ ಮತ್ತು ಸಂಬಂಧಿತ ಅಪರಾಧಗಳಿಂದ ತೊಂದರೆಗೊಳಗಾದ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತವೆ. ಹದಿಹರೆಯದಲ್ಲಿ ಯುವ ಜನತೆ ಸ್ವ- ನಿಯಂತ್ರಣ ಕಳೆದುಕೊಂಡು ಅಥವಾ ಸಹವಾಸ ದೋಷದಿಂದ ಮಾದಕ ವಸ್ತುಗಳೆಡೆಗೆ ವಾಲುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲೂ ಯುವಕರನ್ನು ದಾರಿ ತಪ್ಪಿಸುವ, ಮಾದಕ ದ್ರವ್ಯಗಳನ್ನು ಪೂರೈಸುವ ಕೆಟ್ಟ ಜಾಲಗಳಿಂದ ಹಾಗೂ ಕೆಟ್ಟ ಮಾರ್ಗಗಳಿಗೆ ಎಳೆಯುವ ಗೆಳೆಯರಿಂದ ದೂರವಿರುವಂತೆ ಅವರು ಸಲಹೆ ನೀಡಿದರು.
ಎನ್‌ಐಟಿಕೆ ಸುರತ್ಕಲ್‌ನ ಅಧ್ಯಾಪಕರ ಕಲ್ಯಾಣ ವಿಭಾಗದ ಡೀನ್ ಪ್ರೊ.ಲಕ್ಷ್ಮೀನಿಧಿ, ಎನ್‌ಐಟಿಕೆ ಕುಲಸಚಿವರು, ಆಡಳಿತ ಮುಖ್ಯಸ್ಥರು, ಬೋಧಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.