

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಜನರಿಂದ ಸರ್ಕಾರದ ನೀತಿ-ಕಾರ್ಯಕ್ರಮಗಳ ಬಗ್ಗೆ ಆರೋಗ್ಯಕರ ಸಂವಾದ ನಡೆಯಬೇಕು. ಯಾವುದೂ ಸರಿ-ಯಾವುದು ತಪ್ಪು ಎಂಬುದರ ಬಗ್ಗೆ ಚರ್ಚೆ ನಡೆಯದಿದ್ದರೆ ಪ್ರಜಾಪ್ರಭುತ್ವದಿಂದ ಅನುಕೂಲ ಆಗುವುದಿಲ್ಲ ಎಂದು ಕಾರ್ವಿುಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸೊಮವಾರ ಬೆಳಗಾವಿ ವಿಭಾಗ ಮಟ್ಟದ ಆಯ್ದ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗಾಗಿ ಏರ್ಪಡಿಸಿದ್ದ ಉನ್ನತ ಮಾದರಿ ಸಹಕಾರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ದೇಶವನ್ನು ಆಳುತ್ತಿರುವವರು ಸಾಲದ ಮೊತ್ತವನ್ನು 205 ಲಕ್ಷ ಕೋಟಿ ರೂ. ಮುಟ್ಟಿಸಿದ್ದಾರೆ. ಆದರೆ, ದೇಶದ ಅಭಿವೃದ್ಧಿ ಬಗ್ಗೆ ಬೇರೆಯದೇ ಚಿತ್ರ ತೋರಿಸಲಾಗುತ್ತಿದೆ ಎಂದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ ಸಾಲ ಸೇರಿ 3.70 ಲಕ್ಷ ಕೋಟಿ ರೂ. ಮನ್ನಾ ಮಾಡಿತ್ತು. ಇಂದಿನ ಸರ್ಕಾರ 14.70 ಲಕ್ಷ ಕೋಟಿ ರೂ. ನಷ್ಟು ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಈ ಬಗ್ಗೆ ಜನರು ಪ್ರಶ್ನೆ ಮಾಡಬೇಕು. ಆದರೆ, ಪ್ರಜಾಪ್ರಭುತ್ವದ ಕಾವಲುಗಾರರಾದ ನಾವೆಲ್ಲ ದಿಕ್ಕುತಪ್ಪಿ ಹೋಗುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ. ರಾಜು ಮಾತನಾಡಿ, ಕಳೆದ 20 ವರ್ಷಗಳಿಂದ ಮಹಾಮಂಡಳ ನಡೆಸಿಕೊಂಡು ಬರುತ್ತಿದ್ದೇವೆ. ಮಹಾಮಂಡಳಕ್ಕೆ ಸರ್ಕಾರದ ಅನುದಾನವಿಲ್ಲ. ಇದೀಗ ಅತಿಥಿ ಗೃಹ ನಿರ್ಮಾಣ ಮಾಡಬೇಕೆಂದಿದ್ದೇವೆ. ಅದಕ್ಕೆ ಸರ್ಕಾರದಿಂದ ಹಣಕಾಸು ನೆರವು ಒದಗಿಸಬೇಕು ಎಂದು ಸಚಿವ ಲಾಡ್ ಅವರಲ್ಲಿ ಮನವಿ ಮಾಡಿದರು.