ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್​ ಸ್ಪರ್ಧಿಸಲ್ಲ: ಎಚ್​ಡಿಕೆ

1310059
Published on

ಮಂಡ್ಯ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಯಾವ ಕ್ಷೇತ್ರದಿಂದ ಸ್ಪರ್ಧಿಸ್ತಾರೆ? ರಾಮನಗರ, ಮಂಡ್ಯ ಕ್ಷೇತ್ರದ ಹೆಸರು ಚರ್ಚೆಯಾಗುತ್ತಲೇ ಇತ್ತು. ಇದೀಗ ನಿಖಿಲ್​ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮದ್ದೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ನಿಖಿಲ್ 30ರಿಂದ 40 ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಾರೆ. ನಿಖಿಲ್ ವಿಧಾನಸಭೆಗೆ ಸ್ಪರ್ಧಿಸಲ್ಲ ಎಂದರು.

ಕಳೆದ ವಾರ ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವದ ವೇಳೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಡಿಕೆಶಿ, ದೇವೇಗೌಡರಿಗೆ ಅವಕಾಶ ಮಾಡಿಕೊಟ್ಟಿದ್ದೀರಿ, ಕುಮಾರಸ್ವಾಮಿ ಅವರಿಗೂ ಅವಕಾಶ ಮಾಡಿಕೊಟ್ಟೀದ್ದೀರಿ. ನನಗೂ ಸಿಎಂ ಆಗುವ ಅವಕಾಶ ಮಾಡಿಕೊಡಿ. ರಾಮನಗರ ಕ್ಷೇತ್ರದಲ್ಲಿ ನಾನು ಯಾರನ್ನು ನಿಲ್ಲಿಸುತ್ತೇನೋ ಅವರನ್ನ ವಿಧಾನಸೌಧಕ್ಕೆ ಕಳುಹಿಸಿಕೊಡಿ, ಅದೇ ನನಗೆ ಹೂವಿನಹಾರ. ನಿಮ್ಮ ಜಿಲ್ಲೆಯ ಮಗ ನಾನು. ನನಗೂ ಅವಕಾಶ ಕೊಡಬೇಕು ಎಂಬ ಆಸೆ ನಿಮಗಿದ್ದರೆ ರಾಮನಗರದಲ್ಲಿ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿ ಎಂದು ಮನವಿ ಮಾಡುವ ಮೂಲಕ ಎಚ್​.ಡಿ. ಕುಮಾರಸ್ವಾಮಿಯ ಕರ್ಮಭೂಮಿಯಲ್ಲೇ ಜೆಡಿಎಸ್​ ಅನ್ನು ಹಣಿಯುವ ಇಂಗಿತ ಹೊರಹಾಕಿದ್ದರು. ಈ ಬೆಳವಣಿಗೆ ಬಳಿಕ ನಿಖಿಲ್​ ಅವರೇ ರಾಮನಗರದ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಎಚ್​ಡಿಕೆ, ರಾಮನಗರ, ಚನ್ನಪಟ್ಟಣ ಹಾಗೂ ಇತರೆ ಕ್ಷೇತ್ರಗಳಲ್ಲಿ ನಿಖಿಲ್ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ತಾಯಿ ಅನಿತಾ ಅವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ನಿಖಿಲ್ ಸದ್ಯ ಪಕ್ಷ ಸಂಘಟನೆಯಲ್ಲಿ ಮಾತ್ರ ಸಕ್ರಿಯವಾಗಿ ಪಾಲ್ಗೊಂಡು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ ಎಂದರು.

ಇನ್ನು ಒಕ್ಕಲಿಗ ಸಮುದಾಯದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಎದುರಾಗಿರುವ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲು ರಾಜ್ಯದ ಜನತೆ ತೀರ್ಮಾನ ಮಾಡಬೇಕೆ ಹೊರತು ಯಾರೋ ತೀರ್ಮಾನ ಮಾಡೋದಲ್ಲ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ಕೆಆರ್‌ಎಸ್ ಅಣೆಕಟ್ಟೆ ಸಮೀಪ ಟ್ರಯಲ್ ಬ್ಲಾಸ್ಟಿಂಗ್ ಮಾಡಬೇಕೋ, ಬೇಡವೋ ಎಂಬುದು ಅಲ್ಲಿನ ಪರಿಸ್ಥಿತಿಯ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯ ಸರ್ಕಾರ ಪರಿಸ್ಥಿತಿ ಮತ್ತು ವಾಸ್ತವ ತಿಳಿದುಕೊಂಡು ಸರಿಯಾದ ಕ್ರಮ ಕೈಗೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net