

ಬೆಂಗಳೂರು: ಮೆಡಿಕಲ್ ಓದಲು ಬೇಕಿರುವ ವಿಷಯ ನೀಟ್ ಎಕ್ಸಾಂನಲ್ಲಿ ಇಲ್ಲ. ಇದನ್ನು ಯಾವ ಪುರುಷಾರ್ಥಕ್ಕೆ? ಯಾರ ಅನುಕೂಲಕ್ಕೆ ಮಾಡಡಲಾಗಿದೆ? 2023ರಲ್ಲಿ ಜೆಡಿಎಸ್ ಸರ್ಕಾರ ಬಂದರೆ ನೀಟ್ ವಿರುದ್ಧ ಅಸೆಂಬ್ಲಿಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ. ನಾವು ನೀಟ್ ವಿರೋಧಿಸುತ್ತೇವೆ. ಮಕ್ಕಳ ಜೀವಕ್ಕೆ ಕುಣಿಕೆ ಬಿಗಿದು ಕಂಡವರ ಜೇಬು ಭರ್ತಿ ಮಾಡುವ ಈ ದಂಧೆ ಬೇಕಿಲ್ಲ. ಅದಕ್ಕೆ ಚರಮಗೀತೆ ಹಾಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಎಂಬಿಬಿಎಸ್ ಓದಲು ಯೂಕ್ರೇನ್ಗೆ ಹೋಗಿದ್ದ ಹಾವೇರಿ ಜಿಲ್ಲೆಯ ನವೀನ ರಷ್ಯಾ ಪಡೆ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟ ಘಟನೆ ಉದ್ದೇಶಿಸಿ ಮಾತನಾಡಿರುವ ಎಚ್ಡಿಕೆ, ನೀಟ್ ಬಂದ ಮೇಲೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಅನ್ಯಾಯ ಆಗಿಲ್ಲವೇ? ಲಕ್ಷ ಲಕ್ಷ ಕಿತ್ತು ಪೋಷಕರ ರಕ್ತ ಹೀರುವ ಟ್ಯೂಷನ್ ಅಂಗಡಿಗಳು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೇ? ನೀಟ್ ಸುಳಿಗೆ ಸಿಕ್ಕಿ ಜೀವ ಕಳೆದುಕೊಂಡ ಮಕ್ಕಳ ಆತ್ಮರೋಧನೆ ಕೇಳುತ್ತಿಲ್ಲವೇ? ಎಂದು ಪ್ರಶ್ನಿಸಿರುವ ಎಚ್ಡಿಕೆ, ಇದೆಲ್ಲವೂ ಸರ್ಕಾಗಳ ಕಣ್ಣಿಗೆ ಕಾಣುತ್ತಿಲ್ಲ. ವಿದ್ಯಾರ್ಥಿಗಳ ಆರ್ತನಾದ ಕೇಳುತ್ತಿಲ್ಲ ಎಂದರೆ ಸಚಿವರು ಮತ್ತು ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ ಎಂದು ಭಾವಿಸಬೇಕಾಗುತ್ತೆ ಎಂದು ಕಿಡಿಕಾರಿದ್ದಾರೆ.
ನೀಟ್ ವಿರೋಧಿಸುವವರು ದೇಶದ್ರೋಹಿಗಳು, ಲೂಟಿಕೋರರು ಎಂದು ಅಶ್ವಥ ನಾರಾಯಣ್ ಮಾತನಾಡಿದ್ದಾರೆ. ಇವತ್ತು ನೀಟ್ನಿಂದ ಎಷ್ಟು ಬಡಕುಟುಂಬದ ಮಕ್ಕಳು MBBS ಪಾಸ್ ಮಾಡಿದ್ದಾರೆಂದು ಪಟ್ಟಿ ಕೊಡಲಿ. ನೀಟ್ನಲ್ಲಿ ತೇರ್ಗಡೆಯಾದರೂ ಖಾಸಗಿ ಕಾಲೇಜಿನಲ್ಲಿ ಸೀಟ್ ಪಡೆಯಲು ಒಂದೂವರೆ ಕೋಟಿ ಹಣ ಬೇಕು. ಪಿಯುಸಿಯಲ್ಲಿ ಶೇ.97 ಅಂಕ ಪಡೆದು ನೀಟ್ನಲ್ಲಿ ಫೇಲ್ ಆಗ್ತಾನೆ. ಇದಕ್ಕೆ ಕಾರಣ ಏನು? ಅಶ್ವಥ ನಾರಾಯಣ್ಗೆ ಮನವಿ ಮಾಡ್ತೇನೆ. ಪಿಯುಸಿ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಅಧ್ಯಾಪಕರಿಂದ ನೀಟ್ ಪರೀಕ್ಷೆ ಬರೆಸಿ. ಅದರಲ್ಲಿ ಎಷ್ಟು ಜನ ತೇರ್ಗಡೆಯಾಗ್ತಾರೆ ನೋಡೋಣ. ಮೆಡಿಕಲ್ ಓದಲು ಬೇಕಿರುವ ವಿಷಯ ನೀಟ್ನಲ್ಲಿ ಇಲ್ಲ. ಇದನ್ನು ಯಾವ ಪುರುಷಾರ್ಥಕ್ಕೆ? ಯಾರ ಅನುಕೂಲಕ್ಕೆ ಮಾಡ್ತಿದ್ದೀರಿ? ಕೋಚಿಂಗ್ ಕ್ಲಾಸ್ ಮಾಡುವವರಿಗೆ ದುಡ್ಡು ಮಾಡಲು ನೀಟ್ ಮಾಡಿದ್ದೀರಿ. ಈ ಬಗ್ಗೆ ಮಕ್ಕಳೇ ನನಗೆ ಹೇಳಿದ್ದಾರೆ. ಕೋಚಿಂಗ್ ಕ್ಲಾಸ್ ಫೀಸ್ ಕಟ್ಟಲು ಸಮಸ್ಯೆ ಎಂದಿದ್ದಾರೆ. ಅಂತಹ ಒಂದು ದೊಡ್ಡ ದಂಧೆ ಪ್ರಾರಂಭ ಆಗಿದೆ ಎಂದು ಎಚ್ಡಿಕೆ ಕಿಡಿಕಾರಿದ್ದಾರೆ.
ಇಲ್ಲಿ ನಮ್ಮ ಮಕ್ಕಳಿಗೆ ಸೀಟ್ ಇಲ್ಲ, ಉತ್ತರಭಾರತದ ಮಕ್ಕಳಿಗೆ ಸೀಟ್ ಕೊಡ್ತೀರಿ. ನಾನು ತಮಿಳುನಾಡಿನ ಸಿಎಂ ಅವರನ್ನ ಅಭಿನಂದಿಸುತ್ತೇನೆ. ನೀಟ್ಗೆ ಬೆಂಬಲಿಸಲ್ಲ ಎಂದಿದ್ದಾರೆ ಎಂದು ಎಚ್ಡಿಕೆ ಹೇಳಿದ್ದಾರೆ.
ಯೂಕ್ರೇನ್ನಲ್ಲಿ MBBS ವ್ಯಾಸಂಗ ಮಾಡುತ್ತಿರುವವರನ್ನು ನಮ್ಮ ದೇಶದಲ್ಲಿ MBBS ಪಾಸ್ ಮಾಡಲು ಸಾಧ್ಯವಿಲ್ಲ ಅನ್ನೋ ರೀತಿ ಪ್ರಹ್ಲಾದ್ ಜೋಶಿ ಮಾತನಾಡಿದ್ದಾರೆ. ಇವತ್ತು ರಷ್ಯಾ, ಫಿಲಿಪೈನ್ಸ್, ಯೂಕ್ರೇನ್ಗೆ ನಮ್ಮ ದೇಶದ ಮಕ್ಕಳು ಯಾಕೆ ಹೋಗ್ತಿದ್ದಾರೆ? ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.