ಜೋರು ಮಳೆಯನ್ನೂ ಲೆಕ್ಕಿಸದೆ ನೆನೆಯುತ್ತಲೇ ಕಾರ್ಯಕರ್ತರನ್ನು ಹುರಿದುಂಬಿಸಿದ ದೇವೇಗೌಡ

devegowda
Published on

ಬೆಂಗಳೂರು: ಪ್ರಾದೇಶಿಕ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಗುಡುಗಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ನನಗೆ ಕಾಲು ನೋವಿದೆ. ಆದರೆ ಅದಕ್ಕೆ ಹೆದರಲ್ಲ. ಪ್ರತಿ ಜಿಲ್ಲೆಗೂ ಹೋಗಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ಮುಂಬರುವ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ನಗರ ಘಟಕದಿಂದ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ದೇವೇಗೌಡರು ಭಾಷಣ ಮಾಡುವಾಗ ಜೋರು ಮಳೆ ಬರುತ್ತಿತ್ತು. ಮಳೆಯನ್ನೂ ಲೆಕ್ಕಿಸದೆ ಭಾಷಣ ಮುಂದುವರಿಸಿದ ದೇವೇಗೌಡರು, ಏನೂ ಆಗಲ್ಲ. ಎಲ್ಲೂ ಹೋಗಬೇಡಿ. ನಾನೇ ಧೈರ್ಯವಾಗಿ ನಿಂತಿದ್ದೇನೆ. ತಲೆಯಲ್ಲಿ ಕೂದಲಿಲ್ಲ, ಆದರೂ ನೆನೆಯುತ್ತ ಇದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು.

ದೇವೇಗೌಡ ಹೋದರೆ ಈ ಪಕ್ಷವೂ ಹೋಗುತ್ತೆ ಎಂದು ಲಘುವಾಗಿ ಮಾತನಾಡುವವರಿದ್ದಾರೆ. ನಾನಿಲ್ಲದಿದ್ದರೂ ಜೆಡಿಎಸ್ ಪಕ್ಷವನ್ನು ಉಳಿಸಲು ದೊಡ್ಡ ಕಾರ್ಯಕರ್ತರ ಪಡೆಯೇ ಇದೆ ಎಂದರು. ನಮ್ಮ ಪಕ್ಷದ ಮಹಿಳಾ ಮುಖಂಡರು ಸಹ ಶಕ್ತಿ ತುಂಬಲು ಸಂಘಟನೆಗೆ ಮುಂದಾಗಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ತಂದಿದ್ದು ನಮ್ಮ ಪಕ್ಷ ಎಂದರು.

ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಮಾಜಿ ಶಾಸಕ ಟಿ.ಎ. ಶರವಣ, ಬೆಂಗಳೂರು ನಗರಾಧ್ಯಕ್ಷ ಆರ್. ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ರುಥ್ ಮನೋರಮಾ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net