

ಹಾವೇರಿ: ಯೂಕ್ರೇನ್ನಲ್ಲಿ ರಷ್ಯಾ ಸೇನಾ ಪಡೆಯ ಶೆಲ್ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಗ್ಯಾನಗೌಡರ ಅವರ ಮೃತದೇಹವನ್ನು ಕುಟುಂಬಸ್ಥರು ದಾವಣಗೆರೆಯ ಎಸ್.ಎಸ್.ವೈದ್ಯಕೀಯ ಕಾಲೇಜಿಗೆ ಸೋಮವಾರ ಸಂಜೆ ದಾನ ಮಾಡಿದರು.
ಇಂದು ಬೆಳಗ್ಗೆ ನವೀನ್ ಮೃತದೇಹ ಹುಟ್ಟೂರಿಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಭಾರವಾದ ಮನಸ್ಸಿನಲ್ಲೇ ಆಗಮಿಸಿದ ಸುತ್ತಮುತ್ತಲ ಗ್ರಾಮಸ್ಥರು ನವೀನ್ರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಮಗನನ್ನು ಕಳೆದುಕೊಂಡ ನೋವಿನಲ್ಲೇ ಕುಟುಂಬಸ್ಥರು ಮಗನ ದೇಹ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದರು. ತಾಯಿ ವಿಜಯಲಕ್ಷ್ಮೀ ಮತ್ತು ಅಣ್ಣ ಹರ್ಷ ಅವರು ಮೃತದೇಹದ ಜತೆಗೆ ಆಗಮಿಸಿ ದೇಹದಾನ ಪ್ರಕ್ರಿಯೆ ಪೂರೈಸಿದರು.
ಕೊನೆಯದಾಗಿ ಮಗನನ್ನು ಕಣ್ತುಂಬಿಕೊಂಡ ತಾಯಿ, ಪುತ್ರನ ಹಣೆಗೆ ಮುತ್ತಿಟ್ಟು ಕಂಬನಿ ಸುರಿಸಿದರು. ವಿಭೂತಿ ಮತ್ತು ಕುಂಕುಮ ಹಚ್ಚಿ, ಬಿಲ್ವಪತ್ರೆ ಇಟ್ಟು, ಹಾರ ಹಾಕಿ ಅಂತಿಮ ನಮನ ಸಲ್ಲಿಸಿದರು. ಒಡ ಹುಟ್ಟಿದ ಸಹೋದರನಿಗೆ ಅಣ್ಣ ಹರ್ಷ ವಿದಾಯ ಹೇಳಿದ ದೃಶ್ಯ ಮನಕಲಕುವಂತಿತ್ತು.
ಅಂಗರಚನಾ ಶಾಸ್ತ್ರ ವಿಭಾಗದಲ್ಲಿ ದೇಹದಾನ ಪ್ರಕ್ರಿಯೆ ನಡೆಯಿತು. ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ತಾಯಿ ಮತ್ತು ಸಹೋದರನಿಗೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಸ್. ಪ್ರಸಾದ್ ಪ್ರಮಾಣಪತ್ರ ನೀಡಿದರು. ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಂತಿಮ ದರ್ಶನ ಪಡೆದರು.