

ವಿಜಯವಾಣಿ ಸುದ್ದಿಜಾಲ ಧಾರವಾಡ
ಜ್ಞಾನಾರ್ಜನೆಯು ವಿದ್ಯಾರ್ಥಿಯ ಮೂಲ ಕರ್ತವ್ಯ. ಅದರೊಡನೆ ಸದ್ಗುಣ ಬೆಳೆಸಿಕೊಳ್ಳಬೇಕು. ವಿನಯಶೀಲತೆ, ಸಹನೆ, ಸ್ವಾಭಿಮಾನ, ಸ್ವಾವಲಂಬನೆ, ಪರೋಪಕಾರ, ಪ್ರಾಮಾಣಿಕತನ, ಇತರ ಸದ್ಗುಣ ಬೆಳೆಸಿಕೊಂಡಾಗ ಮಾತ್ರ ಸುಖಿ ಸಮಾಜದ ನಿರ್ಮಾಣ ಸಾಧ್ಯ ಎಂದು ನಟ ಸುಚೇಂದ್ರ ಪ್ರಸಾದ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ಸಿಬಿಎಸ್ಇ ಶಾಲೆಗಳ ಸಾಹಿತ್ಯ ಸಾರಸ್ವತ (ಭಾಷೋತ್ಸವ) ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ನುರಿತ ಭಾಷಾ ತಜ್ಞರಿಂದ ಸಂಸ್ಕೃತ ಕನ್ನಡ ಕಥಾ ಪ್ರಸಂಗ, ದಾಸ ಸಾಹಿತ್ಯ ವಿಶೇಷತೆ, ಸಂಸ್ಕೃತ ಭಾಷಾ ರಚನೆ, ಕನ್ನಡ ಸಾಹಿತ್ಯ ಪರಿಚಯ, ಖಗೋಳ ವಿಜ್ಞಾನಂ, ವರಕವಿ ದ.ರಾ. ಬೇಂದ್ರೆ ಮನೆ ಭೇಟಿ, ಶಾಸ್ತ್ರಾಧ್ಯಯನ ಕ್ರಮ ಮತ್ತು ಪಂಚಾಂಗ ನಿರ್ಮಾಣ, ರಂಗಭೂಮಿ ಅನುಭವ, ಪ್ರಕೃತಿ ಮಡಿಲಲ್ಲಿ ಕಾವ್ಯ ರಚನೆ, ನೀತಿ ಕಾವ್ಯ, ವಚನ ಸಾಹಿತ್ಯ, ಕಾಳಿದಾಸನ ಕಾವ್ಯ ಪರಿಚಯ, ಭಾಷಾ ಪ್ರೇಮ, ಜೀವನ ಮಾರ್ಗದರ್ಶನ, ಭಾರತೀಯ ಜ್ಞಾನ ಪರಂಪರೆ ವಿಷಯಗಳ ಕುರಿತು ಅವಧಿಗಳು ನಡೆದವು.
ಶಾಲೆ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಅನಿತಾ ರೈ, ಶಿಕ್ಷಕರು, ಇತರರು ಇದ್ದರು.
ವಿನಾಯಕ ಭಟ್ಟ ಸ್ವಾಗತಿಸಿದರು. ರಂಗನಾಥ ಕುಲಕರ್ಣಿ ನಿರೂಪಿಸಿದರು. ಶಶಿಕಾಂತ ನಾಯ್ಕ ವಂದಿಸಿದರು.