

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಭೇಟಿ ಮಾಡಿ ರಾಜಕೀಯ ಸಮಾಲೋಚನೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವ ಶಿವಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿದ ಕೆ.ಎನ್.ರಾಜಣ್ಣ ಆರೋಗ್ಯ ವಿಚಾರಿಸಿ ಗಂಟೆಗೂ ಹೆಚ್ಚು ಹೊತ್ತು ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
ಶಿರಾ ಬೈ ಎಲೆಕ್ಷನ್ ಪ್ರಮುಖವಾಗಿದ್ದು, ರಾಜಣ್ಣ ಅವರ ಈ ಭೇಟಿ ಕಾಂಗ್ರೆಸ್ಸಿಗಿಂತಲೂ ಬಿಜೆಪಿ, ಜೆಡಿಎಸ್ ಪಾಳಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸ ಒದಗಿಸಿದೆ. ಸಮ್ಮಿಶ್ರ ಸರ್ಕಾರ ರಚನೆ, ಪತನ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲಿನವರೆಗೆ ಕಾಂಗ್ರೆಸ್ ಪಕ್ಷಕ್ಕಾಗಿ ಲಾಭ-ನಷ್ಟದ ಕುರಿತು ದೀರ್ಘ ಕಾಲ ಚರ್ಚೆ ನಡೆಸಿದ ಉಭಯನಾಯಕರು, ಶಿರಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ, ಅವರ ಗೆಲುವಿಗೆ ಅನುಸರಿಸಬೇಕಾದ ತಂತ್ರಗಾರಿಕೆ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ.
ಬಂಡಾಯ ಶಮನ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ 2015ರಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಪುತ್ರ ಆರ್.ರಾಜೇಂದ್ರ ಸೋಲಿನಿಂದ ಆಕ್ರೋಶಗೊಂಡಿದ್ದ ರಾಜಣ್ಣ, ಈ ಕ್ಷಣದವರೆಗೂ ಪಕ್ಷದ ಹಿರಿಯ ಮುಖಂಡರಾದ ಟಿ.ಬಿ.ಜಯಚಂದ್ರ ವಿರುದ್ಧ ಬಹಿರಂಗವಾಗಿಯೇ ಬಂಡಾಯದ ಬಾವುಟ ಬೀಸಿದ್ದಲ್ಲದೆ, ಸಮ್ಮಿಶ್ರ ಸರ್ಕಾರ ರಚನೆ ಬಳಿಕ ಡಿಸಿಎಂ ಸ್ಥಾನ ಅಲಂಕರಿಸಿದ್ದ ಡಾ.ಜಿ.ಪರಮೇಶ್ವರ್ ವಿರುದ್ಧವೂ ಅಸಮಾಧಾನ ಹೊರಹಾಕುತ್ತಲೇ ಬಂದಿದ್ದಾರೆ.
ಈ ರಾಜಕೀಯ ಬೆಳವಣಿಗೆಯ ಮಾಹಿತಿ ಅರಿತಿರುವ ಶಿವಕುಮಾರ್ ಪದಗ್ರಹಣಕ್ಕೂ ಮುನ್ನ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲೇ ರಾಜಣ್ಣ ಅವರ ಮನೆಗೆ ಹೋಗಿ ಬಂಡಾಯ ಶಮನ ಮಾಡಲು ಬಯಸಿದ್ದರು. ಆದರೆ, ಅದು ಕೈಗೂಡಿರಲಿಲ್ಲ. ಈಗ ಶಿರಾ ಬೈ ಎಲೆಕ್ಷನ್ ಬಳಸಿಕೊಂಡು ತಮ್ಮ ರಾಜಕೀಯ ಬದ್ಧವೈರಿ ಜಯಚಂದ್ರ ನಿದ್ದೆಗೆಡಿಸಲು ರಾಜಣ್ಣ ತಾವೂ ಟಿಕೆಟ್ ಆಕಾಂಕ್ಷಿ ಎಂದಿರುವುದಲ್ಲದೆ, ಶಿರಾ ಸ್ವಾಭಿಮಾನಿ ವೇದಿಕೆ ಹೆಸರಲ್ಲಿ ರಾಜಕೀಯ ಸಮಾವೇಶ ನಡೆಸಲು ಹೊರಟಿರುವುದು ಕಾಂಗ್ರೆಸ್‌ಗೆ ಉಪಸಮರ ಕದನ ಆರಂಭಕ್ಕೂ ಮುನ್ನವೇ ದೊಡ್ಡ ಹಿನ್ನಡೆಯಾಗಿತ್ತು. ಇಂತಹ ಸಂದರ್ಭದಲ್ಲಿ ರಾಜಣ್ಣ ಜತೆ ಶಿವಕುಮಾರ್ ಮಾತುಕತೆ ನಡೆಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಗೆಲುವು ಸಾಧ್ಯ. ಹಾಗಾಗಿ, ಎಲ್ಲ ವೈಮನಸ್ಯ ಮರೆತು ಪಕ್ಷದ ಗೆಲುವಿಗೆ ಶ್ರಮಿಸುವುದು ಅನಿವಾರ್ಯ ಎಂಬುದನ್ನು ಮನದಟ್ಟು ಮಾಡಿಕೊಟ್ಟು ಬಂಡಾಯ ಶಮನಕ್ಕೆ ಪ್ರಯತ್ನ ನಡೆಸಿದ್ದಾರೆ. ಪಕ್ಷದ ಅಧ್ಯಕ್ಷರ ಮಾತಿಗೆ ರಾಜಣ್ಣ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಕಾಂಗ್ರೆಸ್ ಪಾಲಿಗೆ ಆಶಾದಾಯಕವೆನಿಸಿದೆ.
ರಾಜಣ್ಣ ಭವಿಷ್ಯಕ್ಕೆ ಪೂರಕ?: ರಾಜಕೀಯ ಸೇಡು ತೀರಿಸಿಕೊಳ್ಳಲು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಯಚಂದ್ರ ಶಿರಾದಲ್ಲಿ ಗೆದ್ದರೆ ಅರ್ಧ ಮೀಸೆ ತೆಗೆಸಿಕೊಳ್ಳುವೆ ಎಂದು ಸವಾಲು ಹಾಕಿದ್ದ ಕೆ.ಎನ್.ರಾಜಣ್ಣ ಅಭಿವೃದ್ಧಿ ಮೂಲಕ ಮಧುಗಿರಿ ಕ್ಷೇತ್ರದ ಚಿತ್ರಣವನ್ನೇ ಬದಲಿಸಿದ್ದರೂ, ಸೋಲುಣ್ಣಬೇಕಾಯಿತು. ಉಪಚುನಾವಣೆಯಲ್ಲಿ ಕ್ಷೇತ್ರದಾದ್ಯಂತ ಸುತ್ತಾಡಿ ಜಯಚಂದ್ರ ಗೆಲುವಿಗೆ ಶ್ರಮಿಸಿದ್ದೇ ಆದರೆ ಮುಂದೆ ಮಧುಗಿರಿಯಲ್ಲೂ ಬಹುದೊಡ್ಡ ಸಂಖ್ಯೆಯಲ್ಲಿರುವ ಕುಂಚಿಟಿಗ ಸಮುದಾಯ ಕೈಹಿಡಿಯುವ ಸಾಧ್ಯತೆಗಳಿವೆ. ಮನಸ್ತಾಪಗಳನ್ನು ಮರೆತು ಪರಮೇಶ್ವರ್ ಜತೆ ಕೂಡ ಸ್ನೇಹದ ಹಸ್ತ ಚಾಚಿದ್ದೇ ಆದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಹಿಡಿತಹೊಂದಿರುವ ರಾಜಣ್ಣ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ಎನಿಸಲಿದ್ದಾರೆ.