ಹಲ್ಲೇಗೆರೆ ಶಂಕರ್​ ಕುಟುಂಬಸ್ಥರ ದುರಂತ ಸಾವು: ಪೊಲೀಸ್​ ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

suicide case
Published on

ಬೆಂಗಳೂರು: ಇಡೀ ರಾಜ್ಯ ರಾಜಧಾನಿ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಹೆಲ್ಲೇಗೆರೆ ಶಂಕರ್ ಕುಟುಂಬಸ್ಥರ ಆತ್ಮಹತ್ಯೆ ಕೇಸ್​ ಸಂಬಂಧ ಪೊಲೀಸರ ತನಿಖೆ ಚುರುಕುಗೊಂಡಿದ್ದು, ಒಂದೊಂದೇ ಸ್ಫೋಟಕ ರಹಸ್ಯಗಳು ಬಯಲಾಗ್ತಿವೆ.

ಶಂಕರ್​ ಕುಟುಂಬಕ್ಕೆ ಹಣ, ಆಸ್ತಿ-ಅಂತಸ್ತು ಯಾವುದಕ್ಕೂ ಕೊರತೆ ಇರಲಿಲ್ಲ. ಶಂಕರ್​ರ ಮಕ್ಕಳಾದ ಸಿಂಚನಾ, ಸಿಂಧುರಾಣಿ ಮತ್ತು ಮಧುಸಾಗರ್​ ಮೂವರು ಉತ್ತಮ ವಿದ್ಯಾಭ್ಯಾಸ ಮಾಡಿದ್ದರು. ಇಬ್ಬರು ಹೆಣ್ಣುಮಕ್ಕಳನ್ನು ಐಎಎಸ್​ ಕೋಚಿಂಗ್​ಗೂ ಶಂಕರ್​ ಕಳುಹಿಸಿದ್ದರು. ಮಗ ಮಧುಸಾಗರ್​ ಹೆಸರಲ್ಲಿ ಬಾರ್​ ತೆರೆಯಲು ಕೋಟ್ಯಂತರ ರೂಪಾಯಿ ವ್ಯಯಿಸಿ ಲೈಸನ್ಸ್​ ಕೂಡ ಪಡೆದಿದ್ದರು. ಇಷ್ಟೆಲ್ಲ ಅನುಕೂಲತೆ ಇದ್ದರೂ ಮನೆಯಲ್ಲಿ ಆ ಒಂದು ಕಾರಣಕ್ಕೆ ಮನಸ್ತಾಪ ಆಗುತ್ತಲೇ ಇತ್ತಂತೆ. ಅದೇ ಕಾರಣಕ್ಕೆ ಶಂಕರ್​ ಪತ್ನಿ ಭಾರತಿ, ಮೂವರು ಮಕ್ಕಳು, ಸಿಂಧುರಾಣಿಯ 9 ತಿಂಗಳ ಮಗು ಬಲಿಯಾಗಿದ್ದಾರೆ.

ಇಂಜಿನಿಯರಿಂಗ್​ ಪದವೀಧರೆ ಸಿಂಚನಾಳನ್ನು 6 ವರ್ಷದ ಹಿಂದೆ ಪ್ರವೀಣ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಜಕ್ಕೂರು ಬಳಿ ಮನೆ ಮಾಡಿಕೊಂಡಿದ್ದ ಪ್ರವೀಣ್​, ತಂದೆ-ತಾಯಿ, ಪತ್ನಿ ಜತೆ ವಾಸವಿದ್ದ. ಸಿಂಚನಾಗೆ ಅತ್ತೆ-ಮಾವನ ಜತೆ ಇರೋಕೆ ಇಷ್ಟ ಇರಲಿಲ್ಲ. ಬಾಣಂತನಕ್ಕೆ ಬಂದ ಸಿಂಚನಾ ವಾಪಸ್​ ಗಂಡನ ಮನೆಗೆ ಹೋಗಿರಲಿಲ್ಲ. ಪತ್ನಿ ಜತೆ ಪ್ರವೀಣ್ ಮೊಬೈಲ್, ಇ-ಮೇಲ್ ಮೂಲಕ ಸಂಪರ್ಕದಲ್ಲಿದ್ದ. ಬೇರೆ ಮನೆ ಮಾಡಿದ್ರೆ ಬರ್ತೀನಿ ಅಂತಿದ್ಳಂತೆ ಸಿಂಚನಾ.

ಅತ್ತ ಮತ್ತೊಬ್ಬ ಮಗಳು ಸಿಂಧುರಾಣಿಯ ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. 2020ರ ಫೆಬ್ರವರಿಯಲ್ಲಿ ಆಂಧ್ರದ ಗೋರಂಟ್ಲಾ ನಿವಾಸಿ ಶ್ರೀಕಾಂತ್ ಜತೆ ಸಿಂಧುರಾಣಿ ಮದುವೆ ಆಗಿತ್ತು. ಬೆಂಗಳೂರಿನ ಕಾಡುಗೋಡಿಯಲ್ಲಿ ದಂಪತಿ ವಾಸವಿದ್ದರು. ಹೆರಿಗೆಗೆ ತವರು ಮನೆಗೆ ಬಂದಿದ್ದ ಸಿಂಧುರಾಣಿ ಇಲ್ಲೇ ಇದ್ದಳು. ಇದೇ ತಿಂಗಳು ಮಗನ ನಾಮಕರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. 20 ದಿನದ ಹಿಂದೆ ಸಿಂಧು ಆತ್ಮಹತ್ಯೆಗೆ ಯತ್ನಿಸಿದ್ದಳು. ಬೀಗರ ಮನೆಯವರನ್ನ ಹೆದರಿಸಿ ತನ್ನ ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳಲು ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸುವಂತೆ ತಾಯಿ ಭಾರತಿಯೇ ಮಗಳ ತಲೆ ಕೆಡಿಸಿದ್ದಳಂತೆ. ಇದನ್ನ ಪ್ರಶ್ನಿಸಿದ ಶಂಕರ್​ ಮೇಲೆಯೇ ಪತ್ನಿ ಮತ್ತು ಮಕ್ಕಳು ಹಲ್ಲೆಗೂ ಮುಂದಾಗಿದ್ರಂತೆ. ಇದನ್ನೂ ಓದಿರಿ ಹಲ್ಲೇಗೆರೆ ಶಂಕರ್ ಕುಟುಂಬಸ್ಥರ ಆತ್ಮಹತ್ಯೆ: 9 ತಿಂಗಳ ಮಗುವಿನ ಸಾವಿನ ಮೇಲೆ ಪೊಲೀಸರ ಅನುಮಾನ

ಈ ಘಟನೆಗೆ ಮುನ್ನ ಶಂಕರ್​ರ ಮನೆಗೆ ಬಂದ ಕಿರಿಅಳಿಯ ಶ್ರೀಕಾಂತ್ ವಿರುದ್ಧ ಈತನ ಅತ್ತೆ-ಮತ್ತು ಪತ್ನಿ ಇಬ್ಬರು ಜಗಳ ಮಾಡಿ ಮನೆಗೆ ಬಾರದಂತೆ ತಾಕೀತು ಮಾಡಿದ್ದರಂತೆ. ಇಷ್ಟಾದರೂ ಸಿಂಧುರಾಣಿಗೆ ವಾಟ್ಸ್ಆ್ಯಪ್​ ವಿಡಿಯೋ ಕರೆ ಮಾಡುತ್ತಿದ್ದ ಶ್ರೀಕಾಂತ್​, ಮಗುವನ್ನ ನೋಡಿ ಮಾತನಾಡಿಸುತ್ತಿದ್ದ. ದೂರದಲ್ಲಿದ್ದುಕೊಂಡೇ ಪತ್ನಿ ಮತ್ತು ಮಗನ ಬಗ್ಗೆ ವಿಚಾರಿಸುತ್ತಿದ್ದ. ಇಷ್ಟೆಲ್ಲ ಬೆಳವಣಿಗೆ ನಡುವೆಯೂ ಸಿಂಧುರಾಣಿಯ ಮಗುವಿನ ನಾಮಕರಣ ಕಾರ್ಯಕ್ರಮ ಇದೇ ತಿಂಗಳು ನಡೆಸಲು ಸಿದ್ಧತೆಯೂ ನಡೆದಿತ್ತಂತೆ. ನಾಮಕರಣಕ್ಕೂ ಮುನ್ನವೇ ಅಜ್ಜಿ, ದೊಡ್ಡಮ್ಮ, ಸೋದರಮಾವ, ಅಮ್ಮನ ಜತೆ ಮಗು ದುರಂತ ಅಂತ್ಯಕಂಡಿದೆ.

ಇದ್ಯಾವುದರ ಪರಿವೇ ಇಲ್ಲದ ಶ್ರೀಕಾಂತ್​, ಸಾವಿನ ಘಟನೆ ನಡೆದ ದಿನ ಅಂದ್ರೆ ಸೆ.13ರಂದು ಮಗನನ್ನ ನೋಡಲು ಹಂಬಲಿಸಿದ್ದ. ಹಲವು ಭಾರಿ ಮೊಬೈಲ್​ಗೆ ಕರೆ ಮಾಡಿದ್ದ. ಯಾರೂ ಸ್ವೀಕರಿಸಲಿಲ್ಲ. ಸೆ.14-15ರಂದು ಎರಡೂ ದಿನ ತಿಗಳರಪಾಳ್ಯದ ಮನೆಗೆ ಬಂದಿದ್ದ. ಆಗ ಮನೆಯಲ್ಲಿ ಯಾರೂ ಕಾಣದೆ ವಾಪಸ್ ಹೋಗಿದ್ದ. ಈ ಬಗ್ಗೆ ಮಾವ ಶಂಕರ್​ಗೆ ಶ್ರೀಕಾಂತ್ ತಿಳಿಸಿದ್ದ. ಪತ್ನಿ-ಮಗು ಇನ್ನಿಲ್ಲ ಎಂಬ ಸುದ್ದಿ ಶುಕ್ರವಾರ ಶ್ರೀಕಾಂತ್​ಗೆ ಬರಸಿಡಿಲಿನಂತೆ ಬಂದೆರಗಿದೆ.

ನನ್ನ ಪತ್ನಿ ಭಾರತಿಯ ಹಠಮಾರಿತನಕ್ಕೆ ನನ್ನ ಇಡೀ ಕುಟುಂಬವೇ ಬಲಿಯಾಯ್ತು ಎಂದು ಹಲ್ಲೇಗೆರೆ ಶಂಕರ್​ ಪೊಲೀಸರ ಕಣ್ಣೆದುರು ಕಣ್ಣೀರಿಟ್ಟಿದ್ದಾರೆ. ಅಳಿಯ ಶ್ರೀಕಾಂತ್​ ಕೂಡ ಇದೇ ಮಾತನ್ನ ಉಚ್ಛರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net