

ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ತಿಂಗಳ ಮಗು ಕೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, 9 ತಿಂಗಳ ಮಗು ಸಾವಿನ ಮೇಲೆ ಪೊಲೀಸರ ಅನುಮಾನ ಮೂಡಿದೆ.
ಮಾಗಡಿ ರಸ್ತೆ ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ವಾಸವಾಗಿದ್ದ ‘ನಮ್ಮ ಶಾಸಕರ ವಾರ್ತೆ’ ವಾರ ಪತ್ರಿಕೆ ಸಂಪಾದಕ ಹಲ್ಲೇಗೆರೆ ಶಂಕರ್ ಅವರ ಪತ್ನಿ ಭಾರತಿ (50), ಮಕ್ಕಳಾದ ಸಿಂಚನಾ (34), ಸಿಂಧುರಾಣಿ (31) ಮತ್ತು ಮಧುಸಾಗರ್ (27) ಹಾಗೂ ಸಿಂಚನಾಳ 9 ತಿಂಗಳ ಮಗು ಮೃತಪಟ್ಟಿದೆ. 2 ವರ್ಷದ ಪ್ರೇಕ್ಷಾ ಪವಾಡ ಸದೃಶ ಬದುಕುಳಿದಿದ್ದಾಳೆ. ತಾಯಿ ಮತ್ತು ಮಕ್ಕಳ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, 9 ತಿಂಗಳ ಮಗು ಮಲಗಿದ್ದಲ್ಲೇ ಸತ್ತ ಸ್ಥಿತಿಯಲ್ಲಿತ್ತು. ಮಗುವಿನ ಕುತ್ತಿಗೆ ಕೊಳೆತ ಸ್ಥಿತಿಯಲ್ಲಿದ್ದು, ಆ ಭಾಗದಲ್ಲಿ ಮಾತ್ರ ಹುಳುಗಳು ಬಿದ್ದಿದ್ದವು.
ಸಾಮಾನ್ಯವಾಗಿ ಗಾಯಗಳು ಕೊಳೆತಾಗ ಮಾತ್ರ ಹುಳು ಬೀಳೋದು ಎನ್ನುತ್ತಿರುವ ಪೊಲೀಸ್ ಮೂಲಗಳು, ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
2020ರ ಫೆಬ್ರವರಿಯಲ್ಲಿ ಆಂಧ್ರದ ಗೋರಂಟ್ಲಾ ನಿವಾಸಿ ಶ್ರೀಕಾಂತ್ ಜತೆ ಸಿಂಧುರಾಣಿ ಮದುವೆ ಆಗಿತ್ತು. ಬೆಂಗಳೂರಿನ ಕಾಡುಗೋಡಿಯಲ್ಲಿ ದಂಪತಿ ವಾಸವಿದ್ದರು. ಹೆರಿಗೆಗೆ ತವರು ಮನೆಗೆ ಬಂದಿದ್ದ ಸಿಂಧೂರಾಣಿ ಇಲ್ಲೇ ಇದ್ದಳು. ಇದೇ ತಿಂಗಳು ಮಗನ ನಾಮಕರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನಾಮಕರಣಕ್ಕೂ ಮುನ್ನವೇ ಅಜ್ಜಿ, ದೊಡ್ಡಮ್ಮ, ಸೋದರಮಾವ, ಅಮ್ಮನ ಜತೆ ಮಗು ದುರಂತ ಅಂತ್ಯಕಂಡಿದೆ.