

ಚಿಂತಾಮಣಿ: ತಾಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಇಂದಿನಿಂದ(ಜು.11) ಗುರುಪೂಜಾ ಸಂಗೀತೋತ್ಸವ ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ.
ಸೋಮವಾರ ಬೆಳಗ್ಗೆ 6ಕ್ಕೆ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ನೇತೃತ್ವದಲ್ಲಿ ಸಾಮೂಹಿಕ ನಾಮ ಸಂಕೀರ್ತನೆಯೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಯಿತು. ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಕಲಾವಿದರ ಜತೆಗೆ ನಾಡಿನ ಖ್ಯಾತ ಸಂಗೀತ ವಿದ್ವಾಂಸರು ಭಾಗವಹಿಸಿದ್ದಾರೆ.
ಗುರುಪೂಜಾ ಸಂಗೀತೋತ್ಸವದಲ್ಲಿ ಬೊಮ್ಮಿಶೆಟ್ಟಿ ರುನಾಥ್, ಡಿ.ಆರ್.ರಾಜಪ್ಪ ತಂಡ, ಅದಿತಿ ಪ್ರಹ್ಲಾದ್, ವಿನಯ್ ಶರ್ವ ಅವರಿಂದ ಗಾಯನ, ಶ್ರೀಧರ್ ಸಾಗರ್ ಅವರಿಂದ ಸ್ಯಾಕ್ಸಪೋನ್, ಚೆನ್ನೆನ ಕುನ್ನಕುಡಿ ಬಾಲಮುರಳಿಕೃಷ್ಣ, ಕೇರಳದ ಪ್ರಿನ್ಸ್ ರಾಮವರ್ಮ, ಬೆಂಗಳೂರಿನ ಎಸ್.ವಿ.ರಮಣಕುಮಾರ್, ತಿರುವಾರೂರು ಭಕ್ತವತ್ಸಲಂ, ಮುಂಬೈನ ಸುಬ್ಬಲಕ್ಷ್ಮಿ ಸ್ಯಾಕ್ಸಫೋನ್, ಚೆನ್ನೈನ ಯು.ರಾಜೇಶ್ ಮ್ಯಾಂಡೋಲಿನ್, ನೂಪುರ ಫೈನ್ ಆರ್ಟ್ಸ್ನ ರೂಪ ರಾಜೇಶ್ ಅವರಿಂದ ಕೂಚುಪುಡಿ ನೃತ್ಯ, ಬಾಬು, ಕುಮಾರ್ ಹಾಗೂ ಕೇರಳದ ಆನಂದ್ ಕಣ್ಣನ್, ಪಿ.ಎಂ.ರಂಜಿತ್ ವಿನಾಯಕ್, ಸ್ವಾಮಿಮಲೈ ಮುತ್ತುಕುಮಾರ್, ಟಿ.ಜಿ.ಬಾಬು, ಗುರುನಾಥನ್ ಅವರಿಂದ ವಿಶೇಷ ನಾದಸ್ವರ, ತವಿಲ್ ವಾದನ ಇರಲಿದೆ.
ಕಾರ್ಯಕ್ರಮದ ಪ್ರಯುಕ್ತ ಸದ್ಗುರು ತಾತಯ್ಯನವರ ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿದ್ದು, ಕಣ್ಮನ ಸೆಳೆಯುತ್ತಿದೆ.