

ವಿಜಯಪುರ : ನಮ್ಮಲ್ಲಿರುವ ಅಂಧಕಾರ ಮತ್ತು ಅಜ್ಞಾನ ಓಡಿಸಿ, ಜ್ಞಾನ ಎನ್ನುವ ಬೆಳಕು ಚೆಲ್ಲುವವನೇ ಗುರು. ಅಂತಹ ಗುರುವಿಗೆ ಗುಲಾಮನಾದರೆ ವಿದ್ಯೆ ಮತ್ತು ಜ್ಞಾನದೊಂದಿಗೆ ಜೀವನದಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳಲು ಸಾಧ್ಯ ಎಂದು ಬಸವ ಕಲ್ಯಾಣ ಮಠಾಧ್ಯಕ್ಷ ಡಾ.ಮಹದೇವ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀ ಬಸವಕಲ್ಯಾಣ ಮಠ ಬಸವ ಲೋಕದ ಆವರಣದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತ್ಯುತ್ಸವ, ಮಹದೇವ ಸ್ವಾಮಿಜಿ ಅವರ 30ನೇ ಪೀಠಾರೋಹಣ, 66ನೇ ವದ್ಯಂರ್ತ್ಯೋತ್ಸವ, ಮಾತೃಶ್ರೀ ಮರಿಯಮ್ಮ ಅವರ 8ನೇ ಪುಣ್ಯಸ್ಮರಣೆ, ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದ ಪ್ರತಿಷ್ಠಾಪನೆ ಮತ್ತು ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗುರು ಪೂರ್ಣಿಮೆ ಎನ್ನುವುದು ಗುರುಗಳ ಸ್ಮರಣೆಗೆ ಹಾಗೂ ಆಶೀರ್ವಾದ ಪಡೆಯಲು ಇರುವ ಒಂದು ಸುಸಂದರ್ಭ. ಗುರುವಿನ ಆಶೀರ್ವಾದ ಅಥವಾ ಹಾರೈಕೆ ಇದ್ದರೆ ವ್ಯಕ್ತಿ ಜೀವನದಲ್ಲಿ ಉತ್ತಮ ಸ್ಥಾನ ಪಡೆದುಕೊಂಡು ಸಾರ್ಥಕತೆ ಜೀವನ ನಡೆಸುತ್ತಾನೆ ಎಂದು ಹೇಳಿದರು. ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ಗುರುಗಳಿಗೆ ಕೃತತೆ ಸಲ್ಲಿಸುತ್ತ ಗುರು ಪೂರ್ಣಿಮೆಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ ಎಂದು ವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.
ಕೊಳ್ಳಿಪುರದ ಗುರುಪಾದ ಸ್ವಾಮೀಜಿ, ಬಿಡದಿಯ ಹುಚ್ಚಪ್ಪ ಸ್ವಾಮೀಜಿ, ಮೈಸೂರು ಪಾಳ್ಯ ದ ಶಿವಮೂರ್ತಿ ಶ್ರೀಗಳು, ಹುಬ್ಬಳ್ಳಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಸವ ಕಲ್ಯಾಣ ಮಠದ ಕಾರ್ಯದರ್ಶಿ ಪಿ.ಸಿ ಜಯಕುಮಾರ್, ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ, ಅಂಕತಟ್ಟಿಯ ಎಂ.ಪಿ.ಸಿ.ಎಸ್ ಸದಸ್ಯ ನಾರಾಯಣಸ್ವಾಮಿ, ಪುರ ಗ್ರಾಮದ ನಂಜುಂಡಪ್ಪ, ಪಿ.ರಂಗನಾಥಪುರದ ನಂದೀಶ್, ಬಿ.ಎಂ.ಗಣೇಶ್, ಬಿ.ರಾಜಣ್ಣ ಶಿವಕುಮಾರ್ ಇದ್ದರು.