ಹಣಕಾಸಿನ ವಿಚಾರವಾಗಿ ಕಟ್ಟಡ ಕಾರ್ಮಿಕನ ಭೀಕರ ಹತ್ಯೆ

7MD4-1
ಮಂಟೇಸ್ವಾಮಿ ಹತ್ಯೆಯಾಗಿದ್ದ ಸ್ಥಳಕ್ಕೆ ಡಿವೈಎಸ್‌ಪಿ ಕೃಷ್ಣಪ್ಪ, ಮಳವಳ್ಳಿ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಭೀಮಪ್ಪ ಎಸ್.ಬಾಣಸಿ, ರಾಮಸ್ವಾಮಿ, ದೇವರಾಜು ಭೇಟಿ ನೀಡಿ ಪರಿಶೀಲಿಸಿದರು.
Published on

ಕೆ.ಎಂ.ದೊಡ್ಡಿ: ಪಟ್ಟಣದ ಹೊರವಲಯದ ಮಂಡ್ಯ ರಸ್ತೆಯ ಜಮೀನೊಂದರ ಬಳಿ ಹಣಕಾಸಿನ ವಿಚಾರವಾಗಿ ಕಟ್ಟಡ ಕಾರ್ಮಿಕನ ಎದೆಗೆ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಮೆಳ್ಳಹಳ್ಳಿ ಗ್ರಾಮದ ನಿವಾಸಿ ಯಾಲದಹಳ್ಳಿಯ ಮಂಟೇಸ್ವಾಮಿ (36) ದುಷ್ಕರ್ಮಿಗಳಿಂದ ಹತ್ಯೆಯಾದವರು. ರಕ್ತಸಿಕ್ತ ಸ್ಥಿತಿಯಲ್ಲಿ ಮೃತದೇಹ ಮಂಡ್ಯ ರಸ್ತೆಯ ಜಮೀನೊಂದರ ಬಳಿ ಮಂಗಳವಾರ ಪತ್ತೆಯಾಗಿದೆ.

ಬಾರ್ ಬೆಂಡಿಂಗ್ ಕೆಲಸ ಮಾಡುತಿದ್ದ ಮಂಟೇಸ್ವಾಮಿಗೆ ಆತನ ಸ್ನೇಹಿತನಾದ ಮಂಡ್ಯ ಮೂಲದ ರವಿ 20 ಸಾವಿರ ರೂ.ಗಳನ್ನು ಸಾಲವಾಗಿ ನೀಡಿದ್ದ ಎನ್ನಲಾಗಿದೆ. ಸೋಮವಾರ ಬೆಳಗ್ಗೆ ರವಿಗೆ ಹಣವನ್ನು ಮಂಟೇಸ್ವಾಮಿ ಹಿಂತಿರುಗಿಸಿದ್ದಾನೆ. ಬಳಿಕ ತನ್ನ ಪತ್ನಿ, ಮಗುವಿನ ಜತೆ ಮಂಟೇಸ್ವಾಮಿ ದೇವಾಲಯಕ್ಕೆ ತೆರಳಿ ವಾಪಸ್ ಮನೆಗೆ ಬಂದಿದ್ದಾನೆ.

ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ರವಿ ಮಂಟೇಸ್ವಾಮಿಗೆ ಮೊಬೈಲ್ ಕರೆ ಮಾಡಿ ನಿನ್ನ ಬಳಿ ಮಾತನಾಡಬೇಕು ಮಂಡ್ಯ ಸರ್ಕಲ್‌ಗೆ ಬರುವಂತೆ ಕರೆದಿದ್ದಾನೆ. ಅದರಂತೆ ರವಿ ಬಳಿ ಮಂಟೇಸ್ವಾಮಿ ತೆರಳಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಪತ್ನಿ ಮಂಟೇಸ್ವಾಮಿ ಮೊಬೈಲ್‌ಗೆ ಕರೆ ಮಾಡಿದ್ದು ಸ್ವಿಚ್ ಆಫ್ ಎಂದು ಬಂದಿದೆ. ಇದರಿಂದ ಗಾಬರಿಗೊಂಡು ಎಲ್ಲ ಕಡೆ ಹುಡುಕಾಟ ನಡಸಿದ್ದಾರೆ. ರಾತ್ರಿಯಾದರೂ ಪತಿ ಮನೆಗೆ ಬಂದಿರಲಿಲ್ಲ. ಆದರೆ ಬೆಳಗ್ಗೆ ಮಂಡ್ಯ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ವಿಷಯ ತಿಳಿದ ಕೆ.ಎಂ.ದೊಡ್ಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸದಿದಾಗ ಮಂಟೇಸ್ವಾಮಿ ಕೊಲೆಯಾಗಿರುವುದು ಪತ್ತೆಯಾಗಿದ್ದು ಸ್ಥಳಕ್ಕೆ ಡಿವೈಎಸ್‌ಪಿ ಕೃಷ್ಣಪ್ಪ, ಮಳವಳ್ಳಿ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್, ಎಸ್‌ಐಗಳಾದ ಭೀಮಪ್ಪ ಎಸ್.ಬಾಣಸಿ, ರಾಮಸ್ವಾಮಿ, ದೇವರಾಜು ಭೇಟಿ ನೀಡಿ ಪರಿಶೀಲಿಸಿದರು.

ಹಣಕಾಸಿನ ವಿಚಾರದಲ್ಲಿ ಮಂಡ್ಯ ಮೂಲದ ರವಿ ಕೊಲೆ ಮಾಡಿರುವ ಶಂಕೆ ಇದೆ ಎಂದು ಮೃತನ ಸಹೋದರ ಸಿದ್ದಪ್ಪಾಜಿ ಕೆ.ಎಂ.ದೊಡ್ಡಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿ ಪತ್ತೆಗೆ ಶೋಧ ನಡೆಸಿದ್ದಾರೆ.

ಆರೋಪಿ ಬಂಧನಕ್ಕೆ ಆಗ್ರಹ: ಕಟ್ಟಡ ಕಾರ್ಮಿಕ ಮಂಟೇಸ್ವಾಮಿಯನ್ನು ಹತ್ಯೆ ಮಾಡಿರುವ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿ ವಿಶ್ವಕರ್ಮ ಜನಾಂಗದವರು ಭಾರತೀನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಮೃತದೇಹವನ್ನು ಗೂಡ್ಸ್ ಗಾಡಿಯಲ್ಲಿ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ಹತ್ಯೆಯಾಗಿರುವ ಮಂಟೇಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿದರು.

ವಿಶ್ವಕರ್ಮ ಸಮುದಾಯದ ಮುಖಂಡ ಮಳವಳ್ಳಿ ಶ್ರೀನಿವಾಸ್ ಮಾತನಾಡಿ, ಸ್ನೇಹಿತನಿಂದಲೇ ಹತ್ಯೆಯಾಗಿರುವ ಮಂಟೇಸ್ವಾಮಿ ಕುಟುಂಬಕ್ಕೆ ಪೊಲೀಸ್ ಇಲಾಖೆ ನ್ಯಾಯ ಕೊಡಿಸಬೇಕು. ಹಾಗಾಗಿ ಆರೋಪಿಯನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಹತ್ಯೆಯಾಗಿರುವ ಮೃತ ಮಂಟೇಸ್ವಾಮಿ ಬಡವನಾಗಿದ್ದ. ಅವರ ಕುಟುಂಬ ಬೀದಿಗೆ ಬಿದ್ದಿದೆ. ಮದ್ದೂರು ಕ್ಷೇತ್ರದ ಶಾಸಕ ಕದಲೂರು ಉದಯ್ ಅವರು ಮೃತ ಮಂಟೇಸ್ವಾಮಿ ಕುಟುಂಬಕ್ಕೆ ನೆರವು ನೀಡುವಂತೆ ಮನವಿ ಮಾಡಿದರು.

ವಿಶ್ವಕರ್ಮ ಸಮುದಾಯದ ಮುಖಂಡರಾದ ತೈಲೂರು ಆನಂದ್, ಮೆಳ್ಳಹಳ್ಲಿ ಸುರೇಶ್, ಮಳವಳ್ಳಿ ಸೋಮಶೇಖರ್, ಮನು, ಸೋಮ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net