

ಮಡಿಕೇರಿ:
ಕೊಡಗಿನಲ್ಲಿ ಮಳೆ ಕೊರತೆ ಮತ್ತು ಈಗಿನ ಜಲಸಂಕಷ್ಟಕ್ಕೆ ಜಿಲ್ಲೆಯಲ್ಲಿ ಅನಿಯಂತ್ರಿತವಾಗಿ ನಡೆಯುತ್ತಿರುವ ಭೂ ಪರಿವರ್ತನೆಯೇ ಕಾರಣ ಎನ್ನುವುದು ಪರಿಸರವಾದಿಗಳ ವಾದ. ಈ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಭೂ ಪರಿವರ್ತನೆ ನಿಷೇಧಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ಪಶ್ಚಿಮಘಟ್ಟದ ಸೂಕ್ಷ್ಮ ವಲಯದಲ್ಲಿ ಬರುವ ಕೊಡಗಿನಲ್ಲಿ ಈ ತನಕ ೩೧೬ ಪ್ರಕರಣಗಳಲ್ಲಿ ಒಂದು ಎಕರೆಗೆ ಮೇಲ್ಪಟ್ಟು ೧೧೦೭.೫೮ ಎಕರೆ ಜಾಗ ವಿವಿಧ ಉದ್ದೇಶಗಳಿಗಾಗಿ ಭೂ ಪರಿವರ್ತನೆಗೆ ಒಳಪಟ್ಟಿದೆ. ೩೬ ಪ್ರಕರಣಗಳಲ್ಲಿ ೧೦೭.೬ ಎಕರೆ ಜಾಗದ ಪರಿವರ್ತನೆಗಾಗಿ ಹೊಸ ಪ್ರಸ್ತಾವನೆಗಳು ಬಂದಿದೆ.
೨೦೧೮ರ ಆಗಸ್ಟ್‌ನಲ್ಲಿ ಕೊಡಗಿನಲ್ಲಿ ಸಂಭವಿಸಿದ್ದ ಭೀಕರ ಪ್ರಾಕತಿಕ ದುರಂತ ಹಲವು ರೀತಿಯ ಚರ್ಚೆಗಳನ್ನು ಹುಟ್ಟುಹಾಕಿತ್ತು. ಇಲ್ಲಿಯ ಸೂಕ್ಷ್ಮ ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ದಾಳಿಯೇ ಅನಾಹುತಗಳಿಗೆ ಕಾರಣ ಎನ್ನುವ ವ್ಯಾಖ್ಯಾನ ಕೇಳಿ ಬಂದಿತ್ತು. ಈ ಬೆನ್ನಲ್ಲೇ ದುರಂತ ಸಂಭವಿಸಿದ್ದ ಸ್ಥಳಗಳ ಪರಿಶೀಲನೆ ನಡೆಸಿದ್ದ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಕೊಡಗಿನಲ್ಲಿ ಭೂ ಪರಿವರ್ತನೆ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಭೂ ಪರಿವರ್ತನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ೨೦೧೮ರ ನವೆಂಬರ್ ೨೩ರಂದು ಅಂದಿನ ಜಿಲ್ಲಾಧಿಕಾರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದರು. ನಂತರ ೨೦೧೯ರ ಮೇ ೮ರಂದು ಆದೇಶದಲ್ಲಿ ಸ್ವಲ್ಪ ಮಾರ್ಪಾಡು ಮಾಡಿ ವಾಸ್ತವ್ಯದ ಉದ್ದೇಶಕ್ಕೆ ಮನೆ ನಿರ್ಮಾಣ ಮಾಡುವವರಿಗೆ ೧೫ರಿಂದ ೨೦ ಸೆಂಟ್ಸ್ ಪ್ರದೇಶಕ್ಕೆ ಸೀಮಿತಗೊಳಿಸಿ ಭೂ ಪರಿವರ್ತನೆಗೆ ಅನುಮತಿಸಲು ಆದೇಶ ಹೊರಡಿಸಲಾಗಿತ್ತು. ಕೊಡಗಿನಲ್ಲಿ ಸ್ಥಗಿತಗೊಳಿಸಲಾಗಿದ್ದ ಭೂ ಪರಿವರ್ತನೆಗೆ ೨೦೨೦ರಲ್ಲಿ ಮತ್ತೆ ಯಥಾ ಪ್ರಕಾರ ಬಹುತೇಕ ಮುಕ್ತ ಅವಕಾಶ ಸಿಕ್ಕಿತು.
ವಾಣಿಜ್ಯ ಉದ್ದೇಶಕ್ಕೆ ಅತ್ಯಂತ ಹೆಚ್ಚು ಅಂದರೆ ೧ ಎಕರೆಗೂ ಹೆಚ್ಚಿನ ಪ್ರಮಾಣದಲ್ಲಿ ೨೦೦ ಪ್ರಕರಣಗಳಲ್ಲಿ ೭೧೯.೩೫ ಎಕರೆ ಜಾಗ ಕೊಡಗಿನಲ್ಲಿ ಭೂ ಪರಿವರ್ತನೆ ಆಗಿದೆ. ವಸತಿ ಉದ್ದೇಶಕ್ಕೆ ೧೦೧ ಪ್ರಕರಣಗಳಲ್ಲಿ ೩೪೨.೬೧ ಎಕರೆ ಜಾಗ ಹಾಗೂ ಕೈಗಾರಿಕೆ ಉದ್ದೇಶಕ್ಕೆ ೧೫ ಪ್ರಕರಣಗಳಲ್ಲಿ ೪೫.೬೨ ಎಕರೆ ಜಾಗದ ಭೂ ಪರಿವರ್ತನೆ ಆಗಿದೆ.
ಕೊಡಗಿನಲ್ಲಿ ಭೂಪರಿವರ್ತನೆಗಾಗಿ ಷರತ್ತುಗಳಿದ್ದು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ನೀಡಿರುವ ವರದಿಯಲ್ಲಿನ ಅಂಶದಂತೆ ಕಟ್ಟಡಗಳ ರಚನೆ ಸಂಬಂಧ ನಾನ್ ಸ್ಟೇಬಲ್ ಏರಿಯಾ ಇದ್ದಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು. ಭೂ ಪರಿವರ್ತನೆಗೆ ಅನುಮತಿ ಕೋರಿರುವ ಪ್ರದೇಶ ನದಿ, ಹಳ್ಳಗಳಿಂದ ಕನಿಷ್ಠ ೧೦ ಮೀ. ದೂರದಲ್ಲಿರಬೇಕು. ತೀವ್ರತರವಾದ ಇಳಿಜಾರು ಇರುವ ಮತ್ತು ಕಣಿವೆಯಂತಹ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡುವುದು ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು. ೨೦೧೮ರ ಮಳೆಗಾಲದಲ್ಲಿ ಭೂ ಕುಸಿತ ಉಂಟಾದ ಜಮೀನಿನಲ್ಲಿ ಮನೆ ನಿರ್ಮಾಣ ಮಾಡುವುದು ಸೂಕ್ತವಲ್ಲದ ಕಾರಣ ಅಂತಹ ಜಮೀನುಗಳಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು ಎನ್ನುವ ನಿಬಂಧನೆಗಳಿವೆ.
ಕೊಡಗಿನಲ್ಲಿ ಸ್ವಂತ ಉಪಯೋಗಕ್ಕೆ ಸಣ್ಣ ಪ್ರಮಾಣದ ಭೂ ಪರಿವರ್ತನೆಗೆ ಯಾರ ವಿರೋಧವೂ ಇಲ್ಲ. ಆದರೆ ಹಲವರು ಹಣದ ಆಸೆಗಾಗಿ ವಾಣಿಜ್ಯ ಭೂ ಪರಿವರ್ತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ವಿವಿಧ ರೀತಿಯ ವ್ಯಾಪಾರದ ಮೂಲಕ ಭಾರಿ ಲಾಭ ಗಳಿಸಿರುವ ಅತ್ಯಂತ ಶ್ರೀಮಂತರು ಈಗ ತಮ್ಮ ಹಣ ದ್ವಿಗುಣಗೊಳಿಸುವ ಸಲುವಾಗಿ ಲಾಭವನ್ನು ರಿಯಲ್ ಎಸ್ಟೇಟ್‌ಗೆ ಮರುಹೂಡಿಕೆ ಮಾಡುತ್ತಿರುವ ಆರೋಪ ಇದೆ. ಇಂಥ ವಿದ್ಯಮಾನಗಳಿಂದ ಭೂ ಪರಿವರ್ತನೆಗೆ ಹೆಚ್ಚಾಗುತ್ತಿದ್ದು, ಕೊಡಗಿನ ಅಸ್ತಿತ್ವದ ಬಗ್ಗೆಯೇ ಆತಂಕದ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.