ಮಾವು ಬೆಳೆ ನಿರೀಕ್ಷೆಯಲ್ಲಿ ಬೆಳೆಗಾರ

tree
Published on

ಶ್ರೀನಿವಾಸಪುರ: ಈ ವರ್ಷ ಹಿಂಗಾರು ಮಳೆ ಉತ್ತಮ ಆಗಿದ್ದು, ತಂಪಾದ ವಾತಾವರಣದಲ್ಲಿ ಮಾವು ಚಿಗುರೊಡೆಯುತ್ತಿದೆ. ಮೋಡಕವಿದ ವಾತಾವರಣದಿಂದ ಮಾಮರಗಳಲ್ಲಿ ತಡವಾಗಿ ಹೂವು ಬಿಡುತ್ತಿದ್ದು, ಮಾವು ಕೃಷಿಯನ್ನೇ ನಂಬಿದ ರೈತರು ಸಂಪೂರ್ಣ ಹೂವು ಅರಳುವ ಕ್ಷಣಕ್ಕೆ ಕಾದು ಕುಳಿತಿದ್ದಾರೆ.

ತಾಲೂಕಿನಲ್ಲಿ 30 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಮಾವು ಕೃಷಿ ಇದ್ದು, ಹಿಂಗಾರು ಕೃಪೆಯಿಂದ ಭೂಮಿ ತಂಪಾಗಿ ಮಾವಿನ ಮರಗಳು ಸಮರ್ಪಕವಾಗಿ ಹೂವು ಬಿಡಲಾರಂಭಿಸಿದ್ದು, ಬೆಳೆಗಾರರಲ್ಲಿ ಉತ್ತಮ ಸಲಿನ ನಿರೀಕ್ಷೆ ಹೆಚ್ಚಿಸಿದೆ.

ಕಳೆದ ವರ್ಷ ಸಮರ್ಪಕ ಮಳೆ ಬೀಳದೆ ಹೂವು ಸರಿಯಾಗಿ ಬಾರದ ಕಾರಣ ಬೆಳೆ ನಷ್ಟವಾಗಿತ್ತು. ಈ ಬಾರಿ ಮುಂಗಾರಿನಿಂದಲೂ ಮಳೆಯಾಗಿದೆ. ಅಕ್ಟೋಬರ್​ನಿಂದ ವಾಯುಭಾರ ಕುಸಿತದಿಂದ ಬಿದ್ದ ಮಳೆ ತಂಪೆರೆದಿದೆ. ಭೂಮಿಯಲ್ಲಿ ಬಿಸಿಲಿನ ತಾಪ ಕಡಿಮೆಯಾಗಿ ಮೋಡಕವಿದ ವಾತಾವರಣದಿಂದ ಮಾಮರಗಳಲ್ಲಿ ಹೂವು ಅರಳುವುದು ತಡವಾಗಿದೆಯಾದರೂ ಹೆಚ್ಚಿನ ಸಲಿನ ನಿರೀೆ ಇದೆ ಎಂದು ರೈತರು ತಿಳಿಸಿದ್ದಾರೆ.

ಪ್ರತಿ ವರ್ಷ ಮಾವಿನ ಋತು ಪ್ರಾರಂಭವಾಗುತ್ತಲೇ ಒಂದಲ್ಲ ಒಂದು ರೀತಿ ಹವಾಮಾನ ವೈಪರೀತ್ಯದಿಂದ ಮೊಗ್ಗು ಬಿಡುತ್ತಿರಲಿಲ್ಲ. ಆದರೆ ಈ ಬಾರಿ ಮೋಡಕವಿದ ವಾತಾವರಣ ಇದ್ದರೂ ಕಾಲ ಪಕ್ವದಲ್ಲೇ ನಿಧಾನಗತಿಯಲ್ಲಿ ಹೂವು ಅರಳತೊಡಗಿದೆ. ಹೂವು ಬಿಡುವಾಗ ರೋಗ ಅಥವಾ ಕ್ರಿಮಿಗಳು ಬೀಳದಂತೆ ಕ್ರಿಮಿನಾಶಕ ಸಿಂಪಡಿಸಲು ರೈತರು ಮುಂದಾಗಿದ್ದಾರೆ. 2024ರಲ್ಲಿ ಉತ್ತಮ ಸಲು ಬಾರದ ಕಾರಣ ಈ ಬಾರಿ ಉತ್ತಮ ಹೂವು ಬಂದು ಉತ್ತಮ ಸಲು ಕಟ್ಟುತ್ತದೆ ಎನ್ನುವ ನಿರೀಕ್ಷೆಯಲ್ಲಿ ಕೃಷಿಕರು ಇದ್ದಾರೆ.

"ವಂಶಪಾರಂಪರಿಕವಾಗಿ ಮಾವಿನ ಕೃಷಿಯನ್ನೇ ನಂಬಿ ಜೀವನ ಕಟ್ಟಿಕೊಂಡಿರುವ ನಾವು ಪ್ರತಿ ವರ್ಷ ಉತ್ತಮ ಸಲು ಕಾಣುತ್ತಿದ್ದೆವು. ಮೋಡ ಸರಿದು ಬಿಸಿಲೇರಿದರೆ ರೈತರು ಔಷಧ ಸಿಂಪಡಿಸಿದರೆ ಸಮರ್ಪಕ ಹೂವು ಬರುತ್ತದೆ. ಈ ಸಲ ಉತ್ತಮ ಸಲು ಬರುವ ಅವಕಾಶ ಇದೆ. ಕಾಲಪಕ್ವದಲ್ಲಿ ಹೂವು ಬಿಡುತ್ತಿರುವುದರಿಂದ ಉತ್ತಮ ಸಲು ಬರುವುದರಲ್ಲಿ ಸಂಶಯವಿಲ್ಲ."

- ನೀಲಟೂರು ಚಿನ್ನಪರೆಡ್ಡಿ

ಜಿಲ್ಲಾ ಮಾವು ಬೆಳಗಾರರ ಸಂಘದ ಅಧ್ಯಕ್ಷ

"ಅಕ್ಟೋಬರ್​ನಿಂದ ಮಳೆ ಆಗಿದ್ದು, ಭೂಮಿ ತೇವಾಂಶ ಹೆಚ್ಚಾಗಿ ಬಿಸಿಲಿನ ವಾತಾವರಣ ಅಗತ್ಯವಾಗಿತ್ತು. ಡಿಸೆಂಬರ್​ ಮತ್ತು ಜನವರಿಯಲ್ಲಿ ಬಿಸಿಲು ಬಂದು ಭೂಮಿ ಒಣಹವೆ ನಿಮಾರ್ಣವಾಗಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದಂತೆ ಹೂವು ಬೇಗ ಬರುತ್ತದೆ. ಭೂಮಿ ತಂಪಾದಾಗ ಹೂವು ಬಿಡುವುದಿಲ್ಲ. ಹೂವು ಬಿಡಲು ಅಗತ್ಯ ಔಷಧ ತೋಟಗಳ ರಕ್ಷಣೆ ಬಗ್ಗೆ ಈಗಾಗಲೇ ರೈತರಿಗೆ ತಿಳಿಸಿದ್ದೇವೆ. ಹೂವು ಬರುವ ಮುನ್ನ ಔಷಧ ನಿಗದಿತ ಪ್ರಮಾಣದಲ್ಲಿ ಸಿಂಪಡಿಸಿದರೆ ನಿರೀಕ್ಷೆಯಂತೆ ಸಲು ಪಡೆಯಬಹುದು."

- ಎಂ.ಶ್ರೀನಿವಾಸನ್​

ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕ ಶ್ರೀನಿವಾಸಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net