ಗುನ್ನೂರಿಗೆ ಹಸಿರು ಸೊಬಗಿನ ಮೆರುಗು

GUNNURU gramayana 1
Published on

ಅರ್ಕಾವತಿ ನದಿ ದಡದಲ್ಲಿರುವ ವಿಶೇಷ ಗ್ರಾಮ

ಭತ್ತ, ರೇಷ್ಮೆ, ಮಾವು, ತೆಂಗು ಪ್ರಮುಖ ಬೆಳೆ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಒಂದು ಕಡೆ ಹಸಿರು ಕಾನನ, ಮತ್ತೊಂದೆಡೆ ಗಿರಿಶಿಖರ, ಮಗದೊಂದೆಡೆ ಜುಳು ಜುಳು ಎಂದು ಹರಿಯುವ ಅರ್ಕಾವತಿ ನದಿ... ಇಂತಹ ಸುಂದರ ಪ್ರಕೃತಿ ವನಸಿರಿ ಮಧ್ಯೆ ಕೃಷಿ ಪ್ರಧಾನ, ರಾಜಕೀಯ, ಸಾಮಾಜಿಕವಾಗಿ ಗುರುತಿಸಿಕೊಂಡ ಗ್ರಾಮವೇ ಗುನ್ನೂರು ಗ್ರಾಮ.

ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಗುನ್ನೂರು ಗ್ರಾಮಕ್ಕೆ ಪ್ರಕೃತಿ ಸೋಬಗು ಮೆರುಗು ತಂದಿದೆ. ಸುಮಾರು 10 ಸಾವಿರ ಹೆಕ್ಟೇರ್​ಗೂ ವಿಸ್ತಾರದ ಹಂದಿಗೊಂದಿ ಅರಣ್ಯ ಪ್ರದೇಶ ಗ್ರಾಮದ ಪಕ್ಕದಲ್ಲಿದೆ. ಹಿಂದೆ ಗ್ರಾಮ ತೆಂಗಿನಕಲ್​ ಪಾಳೇಗಾರನ ಆಳ್ವಿಕೆಗೆ ಒಳಪಟ್ಟಿತ್ತು ಎನ್ನಲಾಗಿದೆ.

ಜಿಲ್ಲಾ ಕೇಂದ್ರದಿಂದ 11 ಕಿಮೀ ಅಂತರದಲ್ಲಿದ್ದು, ಸುಮಾರು 1500 ಜನಸಂಖ್ಯೆ ಇದೆ. ಗ್ರಾಮದಲ್ಲಿ ಕೃಷಿ ಕುಟುಂಬಗಳೇ ಹೆಚ್ಚಿದ್ದು, ಪ್ರಮುಖವಾಗಿ ಭತ್ತ, ರೇಷ್ಮೆ, ಮಾವು, ತೆಂಗು ಬೆಳೆಯಲಾಗುತ್ತದೆ. ಉಪ ಕಸುಬಾಗಿ ಹೈನುಗಾರಿಕೆ ಹೆಚ್ಚಿದೆ. ಅರ್ಕಾವತಿ ನದಿ ನೀರಿನ ಬವಣೆ ನೀಗಿಸಿದೆ.

ಗ್ರಾಮದ ಇತಿಹಾಸ:

ಗ್ರಾಮದ ಪಕ್ಕದಲ್ಲಿ ಗುಂಡಾಗಿರುವ ದೊಡ್ಡ ಕಲ್ಲಿದ್ದು, ಆ ಕಲ್ಲಿನ ಪಕ್ಕದಲ್ಲೇ ಗ್ರಾಮ ಇದ್ದ ಕಾರಣ ಗುಂಡೂರು ಎಂದು ಕರೆಯುತ್ತಿದ್ದರಂತೆ. ಕಾಲಾಂತರದಲ್ಲಿ ಜನಮನದ ಆಡು ಭಾಷೆಯಲ್ಲಿ ಅದು ಗುನ್ನೂರು ಎಂದು ಬದಲಾಯಿತು ಎಂದು ಹೇಳುತ್ತಾರೆ ಗ್ರಾಮಸ್ಥರು.

ಗ್ರಾಮದೇವತೆಗೆ ಅಗ್ನಿಕೊಂಡ ಹಬ್ಬ

ಗ್ರಾಮದಲ್ಲಿನ ಜನರು ರೇವಣಸಿದ್ದೇಶ್ವರ ಬೆಟ್ಟದ ರೇವಣಸಿದ್ದೇಶ್ವರ, ರೇಣುಕಾಂಭ ದೇವರನ್ನು ಗ್ರಾಮದ ದೇವರನ್ನಾಗಿ ಪೂಜಿಸುತ್ತಿದ್ದರು. ಕಳೆದ 50 - 60 ವರ್ಷಗಳ ಹಿಂದೆ ಅಲ್ಲಿನ ಸ್ಥಳಿಯ ಗ್ರಾಮಸ್ಥರು ಮತ್ತು ಗುನ್ನೂರು ಗ್ರಾಮದ ಜನರಿಗೆ ಸಂರ್ಷ ಉಂಟಾಗಿ ಗ್ರಾಮದಲ್ಲೇ ರೇಣುಕಾಂಭ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪ್ರತಿ ವರ್ಷ ಅಗ್ನಿಕೊಂಡ ಹಬ್ಬ ನಡೆಸಿಕೊಂಡು ಬಂದಿದ್ದಾರೆ.

ಅಂತೆಯೇ, ಗ್ರಾಮದಲ್ಲಿ ಮಾಯಾದೇವಮ್ಮ, ಅಭಯ ಆಂಜನೇಯ, ದೊಡ್ಡಮ್ಮತಾಯಿ, ಕಬ್ಬಾಳಮ್ಮ ದೇವಾಲಯಗಳಿದ್ದು, ಬೆಟ್ಟದ ತಳಭಾಗದಲ್ಲಿ ಭೈರವೇಶ್ವರ ದೇವಾಲಯವಿದೆ. ಪ್ರತಿ ವರ್ಷ ಪರ ಮಾಡಿ ಪೂಜೆ ಸಲ್ಲಿಸಿಕೊಂಡು ಬಂದಿದ್ದಾರೆ.

ವರದಾನವಾದ ವಸತಿ ಶಾಲೆ

ಗ್ರಾಮದ ಪಕ್ಕದಲ್ಲೇ ಸುಮಾರು 10 ಎಕರೆ ಪ್ರದೇಶದಲ್ಲಿ ಡಾ. ಬಿ.ಆರ್​. ಅಂಬೇಡ್ಕರ್​ ವಸತಿ ಶಾಲೆ ನಿರ್ಮಾಣವಾಗಿದೆ. ವಸತಿ ಶಾಲೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಕಾರಣ ಗ್ರಾಮವೂ ಶಿಕ್ಷಣ ೇತ್ರದಲ್ಲಿ ಮುನ್ನೆಲೆಗೆ ಬಂದಿದೆ.

ತೋಟದ ಮನೆಗಳು :

ಇಲ್ಲಿನ ಪ್ರಕೃತಿ ಹಸಿರು ನೋಡಿದ ಹೊರಗಿನವರು ಇಲ್ಲಿ ಜಮೀನು ಖರೀದಿಸಿ ತೋಟದ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಈ ಭಾಗದಲ್ಲಿ ಜಮೀನು ದರವೂ ಹೆಚ್ಚಿದೆ.

ವನ್ಯಪ್ರಾಣಿಗಳ ಉಪಟಳ ತಪ್ಪಲಿ

ಹಂದಿಗೊಂದಿ ರಾಜ್ಯ ಅರಣ್ಯ ಪ್ರದೇಶವಾಗಿರುವ ಕಾರಣ ಇತ್ತೀಚೆಗೆ ಆನೆಗಳ ಉಪಟಳ ಮಿತಿಮೀರಿದೆ. ತೆಂಗಿನಕಲ್ಲು ಅರಣ್ಯಕ್ಕೆ ಸೀಮಿತವಾಗಿದ್ದ ಆನೆಗಳು ಅರ್ಕಾವತಿ ನದಿ ದಾಟಿ ಗುನ್ನೂರು ಭಾಗದ ಹಂದಿಗೊಂದಿ ಅರಣ್ಯ ಪ್ರದೇಶಕ್ಕೂ ಲಗ್ಗೆ ಇಟ್ಟಿದ್ದು, ಆನೆ ದಾಳಿಯಿಂದ ಫಸಲು ನಷ್ಟ ಸಾಮಾನ್ಯವಾಗಿದೆ. ಜತೆಗೆ ಕಾಡು ಹಂದಿಗಳ ಹಾವಳಿಯೂ ಹೆಚ್ಚಿದ್ದು, ಇದು ರೈತರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಈ ಕಾಡುಪ್ರಾಣಿಗಳ ಉಪಟಳ ತಪ್ಪಸಬೇಕೆಂದು ಸ್ಥಳಿಯರು ಮನವಿ ಮಾಡಿದ್ದಾರೆ.

ರಾಜಕೀಯ ನಂಟು

ಗ್ರಾಮದಲ್ಲಿ ಹುಲಿಕೆರೆ - ಗುನ್ನೂರು ಗ್ರಾಪಂ ಅಧ್ಯಕ್ಷರಾಗಿ ಈ ಹಿಂದೆ ಲಕ್ಷ್ಮಮ್ಮ ಮತ್ತು ಕಳೆದ ಭಾರಿ ಸವಿತಾ ದೇವರಾಜು ಆಡಳಿತ. ಪ್ರಸ್ತುತ ಗಿರೀಶ್​ ಗ್ರಾಪಂ ಅಧ್ಯಕ್ಷರಾಗಿ ಅಧಿಕಾರ ನಡೆಸುತ್ತಿದ್ದು, ಗ್ರಾಮ ರಾಜಕೀಯವಾಗಿಯೂ ಮುನ್ನಲೆಗೆ ಬರುತ್ತಿದೆ.

ಗುನ್ನೂರು ಗ್ರಾಮ ಕೃಷಿ ಪ್ರಧಾನ ಗ್ರಾಮವಾಗಿದೆ. ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಮುಂದಿದೆ. ಗ್ರಾಮದ ಬಹುದಿನದ ಅರ್ಕಾವತಿ ಸೇತುವೆ ಕನಸು ನನಸಾಗಿದೆ. ಹಂದಿಗೊಂದಿ ಅರಣ್ಯದಂಚಿನಲ್ಲಿ ಸುಂದರ ವನಸಿರಿಯ ಸೊಬಗು ಗ್ರಾಮದ ಮೆರುಗು ಹೆಚ್ಚಿಸಿದೆ.> ಮಹದೇವಯ್ಯಅಧ್ಯಕ್ಷ, ಹಾಲು ಉತ್ಪಾದಕರ ಸಹಕಾರ ಸಂ, ಗುನ್ನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net