ಹಾನಗಲ್ ಕುಮಾರ ಶಿವಯೋಗಿಗಳು ದೂರದೃಷ್ಟಿಯ ಮಹಾನ್ ನಾಯಕ - ಬಸವಲಿಂಗ ಸ್ವಾಮಿಗಳ ಅಭಿಮತ

BDM 8-1
ಬಾದಾಮಿ ತಾಲೂಕಿನ ಶಿವಯೋಗಮಂದಿರದಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ನವಲಗುಂದದ ಬಸವಲಿಂಗ ಸ್ವಾಮಿಗಳು ಮಾತನಾಡಿದರು. ಸದಾಶಿವ ಸ್ವಾಮಿಗಳು, ಪ್ರಭುಲಿಂಗ ಶ್ರೀಗಳು ಇತರರಿದ್ದರು.
Published on

ಬಾದಾಮಿ: ದೇಶದಲ್ಲಿ ಪ್ರಸ್ತುತ ಯೋಗ ಮತ್ತು ಆಯುರ್ವೇದದ ಬಗ್ಗೆ ಪ್ರಚಾರ ಜೋರಾಗಿದ್ದು, ಇಂತಹ ಒಂದು ಪ್ರಯತ್ನವನ್ನು ಹಾನಗಲ್ ಕುಮಾರ ಶಿವಯೋಗಿಗಳು ಆ ದಿನಗಳಲ್ಲಿಯೇ ಸಮಾಜಕ್ಕೆ ಅರ್ಪಿಸಿ ದೂರದೃಷ್ಟಿಯ ಒಬ್ಬ ಮಹಾನ್ ಶಿವಯೋಗಿಯಾಗಿದ್ದರು ಎಂದು ನವಲಗುಂದದ ಬಸವಲಿಂಗ ಸ್ವಾಮಿಗಳು ಹೇಳಿದರು.

ತಾಲೂಕಿನ ಸುಕ್ಷೇತ್ರ ಮದ್ವೀರಶೈವ ಶಿವಯೋಗಮಂದಿರ ಸಂಸ್ಥೆ ವತಿಯಿಂದ ಕುಮಾರೇಶ್ವರರ ಕರ್ತೃ ಗದ್ದುಗೆಯ ಆವರಣದಲ್ಲಿ ಪೂಜ್ಯರ ಸಮ್ಮುಖ ಹಾಗೂ ವಟುಸಾಧಕರ ಉಪಸ್ಥಿತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗಮಂದಿರ ಸಂಸ್ಥೆ ಸಂಸ್ಥಾಪಕರು, ಕಾರಣಿಕ ಯುಗಪುರುಷ ಹಾನಗಲ್ ಕುಮಾರ ಶಿವಯೋಗಿಗಳ 155 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವಯೋಗಮಂದಿರ ಸಂಸ್ಥೆ ಉಪಾಧ್ಯಕ್ಷ ಸದಾಶಿವ ಸ್ವಾಮಿಗಳು ಮಾತನಾಡಿ, ಹಾನಗಲ್ ಕುಮಾರ ಶಿವಯೋಗಿಗಳು ಸಮಾಜಸೇವೆ ಹಾಗೂ ಶಿವಯೋಗಮಂದಿರ ಸ್ಥಾಪನೆಯ ಮೂಲ ಉದ್ದೇಶ ಸಾಕಾರಗೊಳಿಸಿದ ಶಿವಯೋಗಿಯಾಗಿದ್ದಾರೆ ಎಂದರು.

ಅಣ್ಣಿಗೇರಿಯ ಪ್ರಭುಲಿಂಗ ಸ್ವಾಮಿಗಳು ಮಾತನಾಡಿ, ಹಾನಗಲ್ ಕುಮಾರ ಶಿವಯೋಗಿಗಳ ಜಯಂತಿ ಆಚರಿಸುತ್ತಿರುವುದು ನಮಗೆಲ್ಲ ಹೆಮ್ಮೆ ವಿಷಯ ಎಂದರು. ವಟುಗಳು ಹಾನಗಲ್ ಕುಮಾರ ಶ್ರೀಗಳ ಕುರಿತು ಮಾತನಾಡಿದರು. ಅನ್ನಪ್ರಸಾದ ಜರುಗಿತು. ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಮುಖಂಡರಾದ ಪಂಪಣ್ಣ ಕಾಚೆಟ್ಟಿ, ಇಷ್ಟಲಿಂಗ ಶಿರಶಿ, ಆರ್.ಬಿ.ಸಂಕದಾಳ ಹಾಗೂ ಅಕ್ಕನ ಬಳಗದ ಸದಸ್ಯರು, ವಿವಿಧ ಪೂಜ್ಯರು ಹಾಜರಿದ್ದರು. ಸಿ.ಸಿ.ಹಿರೇಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net