

ಯಲ್ಲಾಪುರ: ತೀವ್ರ ಕುತೂಹಲ ಕೆರಳಿಸಿದ್ದ ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯ ಮತ ಎಣಿಕೆ ಶನಿವಾರ ನಡೆದಿದ್ದು, ಹಾಲಿ ಅಧ್ಯಕ್ಷ ನಾಗರಾಜ ಕವಡಿಕೆರೆ ನೇತೃತ್ವದ ತಂಡ ಭರ್ಜರಿ ಗೆಲುವು ಸಾಧಿಸಿದೆ. ಶಾಸಕ ಶಿವರಾಮ ಹೆಬ್ಬಾರ ಬೆಂಬಲಿತ ತಂಡಕ್ಕೆ ಭಾರಿ ಮುಖಭಂಗವಾಗಿದೆ. ಬಿಜೆಪಿ ಬೆಂಬಲಿತರಲ್ಲೇ ಎರಡು ತಂಡಗಳಾಗಿ ಚುನಾವಣೆ ನಡೆದಿದ್ದು, ಅದರಲ್ಲಿ ಹಾಲಿ ಆಡಳಿತ ಮಂಡಳಿಯವರೇ ಮೇಲುಗೈ ಸಾಧಿಸಿದ್ದಾರೆ.
11 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ನಾಗರಾಜ ಕವಡಿಕೆರೆ ನೇತೃತ್ವದ ತಂಡ 10 ಸ್ಥಾನಗಳಲ್ಲಿ ಜಯ ಗಳಿಸಿದರೆ, ಹೆಬ್ಬಾರ ಬೆಂಬಲಿತ ತಂಡದಿಂದ ನೇತೃತ್ವ ವಹಿಸಿದ್ದ ಆರ್.ಎಸ್. ಭಟ್ಟ ಮಾತ್ರ ಗೆಲುವು ಸಾಧಿಸಿದ್ದಾರೆ. ನಾಗರಾಜ ಕವಡಿಕರೆ, ನರಸಿಂಹ ಕೋಣೆಮನೆ, ಟಿ.ಆರ್. ಹೆಗಡೆ, ಆರ್.ಎಸ್. ಭಟ್ಟ, ಟಿ.ಜಿ. ಘಟ್ಟಿ, ಪ್ರಭಾ ಭಾಗ್ವತ, ಶ್ಯಾಮಲಾ ಹೆಗಡೆ, ಅಪ್ಪು ಆಚಾರಿ, ಗ್ಯಾಬ್ರಿಯಲ್ ಫರ್ನಾಂಡೀಸ್, ಹನುಮಂತ ಕೊರವರ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಸುಬ್ಬಣ್ಣ ದಾನ್ಯಾನಕೊಪ್ಪ ಆಯ್ಕೆಯಾಗಿದ್ದಾರೆ.
ಎಲೆಕ್ಷನ್ ನಡೆದು 21 ದಿನಗಳ ಬಳಿಕ ಮತ ಎಣಿಕೆ
ಕಳೆದ ಜೂ. 18 ರಂದು ಚುನಾವಣೆ ನಡೆದಿದ್ದು, ಅನರ್ಹ ಸದಸ್ಯರು ನ್ಯಾಯಾಲಯದ ಮೊರೆ ಹೋದ ಕಾರಣಕ್ಕಾಗಿ ಜೂ. 26 ರವರೆಗೆ ಮತ ಎಣಿಕೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. 26ರಂದು ಮತ ಎಣಿಕೆ ನಡೆಸಲು ನ್ಯಾಯಾಲಯ ಆದೇಶ ನೀಡಿದ್ದರೂ, ಆದೇಶದ ಪ್ರತಿ ಚುನಾವಣಾಧಿಕಾರಿಗಳಿಗೆ ತಲುಪಲು ವಿಳಂಬವಾದ ಕಾರಣ ಚುನಾವಣೆ ನಡೆದು 21 ದಿನಗಳ ಬಳಿಕ ಮತ ಎಣಿಕೆ ನಡೆಯಿತು. ಅಲ್ಲಿಯವರೆಗೆ ಉಪಖಜಾನೆಯಲ್ಲಿದ್ದ ಮತ ಪೆಟ್ಟಿಗೆಗಳನ್ನು ಉಪಖಜಾನೆ ಎದುರು ನಾಗರಾಜ ಕವಡಿಕೆರೆ ನೇತೃತ್ವದ ಅಭ್ಯರ್ಥಿಗಳು ಕಾಯುತ್ತಿದ್ದುದು ವಿಶೇಷವಾಗಿತ್ತು. ಆನಗೋಡ ಮತ್ತು ಇಡಗುಂದಿ ಸಹಕಾರಿ ಸಂಘಗಳ ಮತ ಎಣಿಕೆಯೂ ಇದೇ ರೀತಿ ವಿಳಂಬವಾಗಿದ್ದು, ಅಲ್ಲಿಯ ಅಭ್ಯರ್ಥಿಗಳೂ ಮತಪೆಟ್ಟಿಗೆ ಕಾಯುತ್ತಿದ್ದಾರೆ. ಆನಗೋಡ ಸಹಕಾರಿ ಸಂಘದ ಮತ ಎಣಿಕೆ ಜು. 9ರಂದು ಹಾಗೂ ಇಡಗುಂದಿಯ ಮತ ಎಣಿಕೆ ಜು. 10ರಂದು ನಡೆಯಲಿದೆ. ಅಲ್ಲಿಯವರೆಗೆ ಮತ ಪೆಟ್ಟಿಗೆ ಕಾವಲು ಮುಂದುವರಿಯಲಿದೆ!.