

ತೇರದಾಳ: ನುಡಿದಂತೆ ನಡೆದು ಭೂಲೋಕದಲ್ಲಿ ಸ್ವರ್ಗದ ಅನುಭವ ಹಂಚಿ, ಶಾಶ್ವತ ಲೋಕದತ್ತ ಸಾಗಿದ ಮಹಾನ್ ಚೇತನ, ನಡೆದಾಡುವ ದೇವರು ಸಿದ್ಧೇಶ್ವರ ಅಪ್ಪಗಳ ಸವಿನೆನೆಪು ಸದ್ಭಕ್ತರ ಹೃದಯಮಂದಿರದಲ್ಲಿ ಸದಾ ಹೊಳೆಯುತ್ತಿದೆ ಎಂದು ಡಾ. ಎಸ್.ಎನ್. ಸಲಬನ್ನವರ ಬಣ್ಣಿಸಿದರು.
ತಾಲೂಕಿನ ಸಸಾಲಟ್ಟಿ ಗ್ರಾಮದ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಪ್ರಾಥಮಿಕ ಮತ್ತು ಪಿಯು ಹಾಗೂ ಸಿದ್ಧೇಶ್ವರ ಶ್ರೀಗಳ ಸದ್ಭಕ್ತರ ಸಂಯುಕ್ತಾಶಯದಲ್ಲಿ ಮಂಗಳವಾರ ಆಯೋಜಿಸಿದ್ದ ಗುರುನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಆಧ್ಯಾತ್ಮಿಕ ಲೋಕದ ಅನುಭವವನ್ನು ಪ್ರತಿಯೊಬ್ಬ ಸದ್ಭಕ್ತರಲ್ಲೂ ಹಂಚುವ ಮೂಲಕ ಅರ್ಥಪೂರ್ಣವಾಗಿ ಬದುಕಿದ ಮಹಾನ್ ಸಂತ. ಅವರ ಜೀವನ ಮತ್ತು ತತ್ವ ಮಾರ್ಗವು ಸಕಲರಿಗೆ ಉತ್ತಮವಾಗಿದೆ ಎಂದರು.
ಸಂಘದ ಸದಸ್ಯ ಜಕ್ಕಪ್ಪ ಜಲಪೂರ ಮಕ್ಕಳಿಗೆ ಸಿಹಿ ಹಂಚಿದರು. ಮುಖ್ಯಗುರು ಸಿದ್ದು ಕಮದಿನ್ನಿ, ಪ್ರಾಚಾರ್ಯ ಎಂ.ಎಸ್. ಮೂಡಸಿ, ಸಹಕಾರಿ ಮ್ಯಾನೇಜರ್ ಗುಂಡುರಾವ್ ಕಡಹಟ್ಟಿ ಸೇರಿ ಶಿಕ್ಷಕ, ಉಪನ್ಯಾಸಕ ಸಿಬ್ಬಂದಿ ಇದ್ದರು.