

ತಿ.ನರಸೀಪುರ: ಹದಿನಾರನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆಯನ್ನು ಅರಿತಿದ್ದ ಕನಕದಾಸರು ಜಾತಿ ವ್ಯವಸ್ಥೆಯನ್ನು ಪ್ರಬಲವಾಗಿ ಖಂಡಿಸಿದ ಸಂತ ಶ್ರೇಷ್ಠರು ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಶ್ರೇಷ್ಠ ಕವಿ ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಿಮ್ಮಪ್ಪ ನಾಯಕ ಕನಕದಾಸರಾದ ಬಳಿಕ ವ್ಯಾಸರಾಯರ ಶಿಷ್ಯರಾಗಲು ಹೋದಾಗ ಶೂದ್ರ ಸಮುದಾಯಕ್ಕೆ ಸೇರಿದವರು ಎಂದು ದೂರ ತಳ್ಳಲ್ಪಡುತ್ತಾರೆ. ಅಲ್ಲಿಂದಲೇ ಕೀರ್ತನೆಗಳ ಮೂಲಕ ಸಾಮಾಜಿಕ ಜಾಗೃತಿಯನ್ನು ಆರಂಭಿಸಿದ ಕನಕರು ಅಂದು ಕುಲದ ನೆಲೆಯನ್ನ ಬಲ್ಲಿರಾ ಎಂದು ಪ್ರಶ್ನಿಸಿದರು. ಆ ಪ್ರಶ್ನೆ ಇಂದಿಗೂ ಪ್ರಸ್ತುತವಾಗಿದೆ ಎಂದರು.
ನಾಡಿನಲ್ಲಿ ಬಸವಾದಿ ಶರಣರು ಜನ್ಮ ತಾಳಿದ್ದರೆ. ಗೌತಮ ಬುದ್ಧ, ಮಹಾತ್ಮ ಗಾಂಧೀಜಿ, ಡಾ. ಅಂಬೇಡ್ಕರ್ ಹಾಗೂ ಇನ್ನೂ ಹಲವು ಬಹುದೊಡ್ಡ ನಾಯಕರು ಬದುಕಿನ ಆದರ್ಶ ಹಾಗೂ ಸನ್ಮಾರ್ಗವನ್ನು ನಮ್ಮೆಲ್ಲರಿಗೂ ಬಿಟ್ಟು ಹೋಗಿದ್ದಾರೆ. ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಲು ದೇವರು ಆಗಾಗ ಮಹಾತ್ಮರ ರೂಪದಲ್ಲಿ ಭೂಮಿಗೆ ಬರುತ್ತಾರೆ. ಚಿನ್ನದ ಬದಲು ಚಿನ್ನದಂತಹ ಮನಸ್ಸಿದ್ದರೆ ದೊಡ್ಡ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂಬುದನ್ನ ಚಿನ್ನದ ಕೊಪ್ಪರಿಗೆಯಲ್ಲಿ ಜನಿಸಿದ ಕನಕದಾಸರು ಸಂದೇಶ ನೀಡಿದ್ದಾರೆ ಎಂದು ಸುನೀಲ್ ಬೋಸ್ ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಶೋಷಿತ ಸಮುದಾಯದ ಪರ ಧ್ವನಿಯೆತ್ತಿದ ಕನಕದಾಸರು ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದರು. 16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಬಹಳ ಪ್ರಬಲವಾಗಿತ್ತು. ತಳ ಸಮುದಾಯಗಳು ಶೋಷಣೆಗೆ ಒಳಗಾಗಿದ್ದಂತ ಸಂದರ್ಭದಲ್ಲಿ ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದ್ದಾರೆ. ಕನಕದಾಸರು ಬರಿ ದಾರ್ಶನಿಕರು, ಸಾಹಿತಿ, ಮಾತ್ರ ಅಲ್ಲ. ಅವರೊಬ್ಬ ಸಮಾಜ ಸುಧಾರಕ. ದಂಡನಾಯಕರಾಗಿದ್ದ ಕನಕ ನಾಯಕರು ದಾಸತ್ವದ ಕಡೆಗೆ ತೆರಳಿ ಭಗವಂತನನ್ನು ಆರಾಧಿಸುವ ಮೂಲಕ ಕೀರ್ತನೆಗಳ ಮೂಲಕ ಆಧ್ಯಾತ್ಮಿಕ ಚಿಂತನೆಗಳನ್ನು ಮನುಕುಲಕ್ಕೆ ಬಿತ್ತಿ ಬದುಕಿನ ಸನ್ಮಾರ್ಗವನ್ನು ತೋರಿಸಿದ್ದಾರೆ ಎಂದರು. ಹಿರಿಯ ಶಿಕ್ಷಕ ಎಂ.ಮಹದೇವ್ ಮಾತನಾಡಿ, ಕನಕರ ಜೀವನ ಚರಿತ್ರೆಯ ಬಗ್ಗೆ ವಿವರಿಸಿದರು.
ಅದ್ದೂರಿ ಮೆರವಣಿಗೆ: ಪಟ್ಟಣದ ಶ್ರೀ ಗುಂಜ ನರಸಿಂಹ ಸ್ವಾಮಿ ದೇವಾಲಯದ ಬಳಿ ಶ್ರೀ ಭಕ್ತ ಕನಕದಾಸರ ಪುತ್ಥಳಿ ಮೆರವಣಿಗೆಗೆ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅವರು ನಂದಿ ಕಂಬಕ್ಕೆ ಪೂಜಿ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಂದಿ ಸ್ತಂಬ, ವೀರಗಾಸೆ, ಡೊಳ್ಳು ಕುಣಿತ, ಕೀಲುಕುದುರೆ, ಗೊರವನ ಕುಣಿತ, ಕಂಸಾಳೆ, ದೊಣ್ಣೆ ವರಸೆ ಸೇರಿದಂತೆ ವಿವಿಧ ಕಲಾತಂಡ ಹಾಗೂ ಪ್ರತಿಮೆಯೊಂದಿಗೆ ಮೆರವಣಿಗೆಯು ತಾಲೂಕು ಕಚೇರಿವರೆಗೂ ಸಾಗಿತು. ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಲಿಂಕ್ ರಸ್ತೆ ಹಾಗೂ ಕಾಲೇಜು ರಸ್ತೆಯನ್ನು ಕಳೆದ ಎರಡು ದಿನಗಳಿಂದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಶ್ರೀ ವೆಂಕಟೇಶ್ವರ ದೇವಾಲಯದ ದೊರೆಸ್ವಾಮಿ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಕೆ.ಮಹದೇವ, ಪುರಸಭೆ ಅಧ್ಯಕ್ಷೆ ಬಿ.ವಸಂತ ಶ್ರೀಕಂಠ, ಸದಸ್ಯರಾದ ಟಿ.ಎಂ.ನಂಜುಂಡಸ್ವಾಮಿ, ಸಿ.ಪ್ರಕಾಶ್, ಎನ್.ಸೋಮು, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಕುರುಬರ ಸಂಘದ ಅಧ್ಯಕ್ಷ ಎಂ.ಎಸ್. ಮಹಾದೇವಸ್ವಾಮಿ(ಮನ್ನೆಹುಂಡಿ ಮಹೇಶ), ಪ್ರಧಾನ ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು, ಮಾಜಿ ಅಧ್ಯಕ್ಷ ಟಿ.ಎಸ್.ಪ್ರಶಾಂತ್ ಬಾಬು, ಕಾರ್ಯಾಧ್ಯಕ್ಷ ಪೂಜಾ ಪುಳ್ಳಾರಿ ಮಾದೇಶ, ಖಜಾಂಚಿ ಮಲ್ಲೇಶ, ನಿರ್ದೇಶಕರಾದ ಎಚ್.ಸಿ.ಅರುಣ್ ಕುಮಾರ್, ಮೂಗೂರು ಸತೀಶ, ಎಂ.ಬಿ. ಚಂದ್ರಶೇಖರ್, ತಾಪಂ ಮಾಜಿ ಅಧ್ಯಕ್ಷರಾದ ಎಂ.ಮಲ್ಲಿಕಾರ್ಜುನಸ್ವಾಮಿ, ಎಂ.ರಮೇಶ್, ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಮಾಜಿ ಸದಸ್ಯರಾದ ಕುಕ್ಕೂರು ಗಣೇಶ್, ರಾಮಲಿಂಗಯ್ಯ, ವರುಣಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಸಂಚಾಲಕ ಬಿ ಮನ್ಸೂರ್ ಆಲಿ, ಪಪಂ ಮಾಜಿ ಸದಸ್ಯ ರಾಘವೇಂದ್ರ, ಮುಖ್ಯ ಅಧಿಕಾರಿ ವಸಂತ ಕುಮಾರಿ, ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಬಿಇಒ ಎಸ್.ಸಿ. ಶಿವಮೂರ್ತಿ, ಬಿಆರ್‌ಸಿ ನಾಗೇಶ್, ಮುಖಂಡರಾದ ಹಾಳೇಗೌಡ, ಗುರುಸ್ವಾಮಿ, ಮಸ್ರೂರ್ ಅಹಮದ್, ಹುಣಸೂರು ಬಸವಣ್ಣ, ಮುಸುವಿನ ಕೊಪ್ಪಲು ಶಿವರಾಂ, ಅಕ್ಕೂರು ಗುರುಮೂರ್ತಿ, ಎ.ಬಿ.ಮಂಜುನಾಥ್, ವಾಟಾಳು ನಾಗೇಶ್, ಕಿರಗಸೂರು ಕಾಂತರಾಜು, ಚಂದ್ರಮ್ಮ, ತ್ರಿವೇಣಿ ನಗರ ಮಹದೇವಮ್ಮ, ಕೇತಹಳ್ಳಿ ಸಿದ್ದಶೆಟ್ಟಿ, ಸಿ. ಪುಟ್ಟಮಲ್ಲಯ್ಯ ಇತರರು ಇದ್ದರು.