

ಪಾಂಡವಪುರ : ಮಂಡ್ಯ ಜಿಲ್ಲೆ ಹಲವಾರು ಅಪ್ರತಿಮ ರಾಜಕಾರಣಿಗಳಿಗೆ ಜನ್ಮಕೊಟ್ಟಿದೆ. ಅಂಥವರ ಸಾಲಿನಲ್ಲಿ ಮರಿದೇವೇಗೌಡ ಅವರು ಸಹ ಒಬ್ಬರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ಪಟ್ಟಣದ ಕಸಾಪ ಭವನದಲ್ಲಿ ಚಿಕ್ಕಾಡೆಯ ಜನಕಲ್ಯಾಣ ಪ್ರತಿಷ್ಠಾನ ವತಿಯಿಂದ ನಡೆದ ಮರಿದೇವೇಗೌಡರ ಮೂರನೇ ವರ್ಷದ ಪುಣ್ಯಸ್ಮರಣೆ ಮತ್ತು ಸ್ಮಾರಕ ಜನಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ ಕ್ಷೇತ್ರದಲ್ಲಿ ಶ್ರೇಷ್ಠ ರಾಜಕಾರಣಿಗಳನ್ನು ಗುರುತಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಹತ್ತು ರಾಜಕಾರಣಿಗಳ ಪೈಕಿ ಒಬ್ಬ ಶ್ರೇಷ್ಠ ರಾಜಕಾರಣಿಯನ್ನು ಗುರುತಿಸಿದರೆ ಸಮಾಜ ನಮ್ಮನ್ನು ಟೀಕಿಸುತ್ತದೆ ಎಂಬ ಹಿಂಜರಿಕೆ ಮನೋಭಾವ ಇವತ್ತಿನ ರಾಜಕೀಯ ಕ್ಷೇತ್ರದಲ್ಲಿ ಎದುರಾಗಿದೆ ಎಂದರು.
ಮರಿದೇವೇಗೌಡರು ಕುಟುಂಬಕ್ಕಿಂತ ಹೆಚ್ಚು ಸಮಯವನ್ನು ಸಮಾಜ, ಸಮುದಾಯಕ್ಕಾಗಿ ನೀಡಿದ್ದಾರೆ. ಅವರ ಕನಸು ಕುಟುಂಬದಿಂದಾಚೆಗಿತ್ತು. ಸಮಾಜ, ನೆಲ ಮತ್ತು ತಮ್ಮನ್ನು ನಂಬಿದವರ ಪರವಾಗಿ ಮೌಲ್ಯಯುತ ರಾಜಕಾರಣ ಮಾಡಿದವರು. ಹಾಗಾಗಿ ಸಮಾಜದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಸಾಧ್ಯವಾಗಿದೆ ಎಂದರು.
ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ನಮ್ಮ ಮನೆ, ಕುಟುಂಬ, ಗ್ರಾಮ, ರಾಷ್ಟ್ರ ಹಾಗೂ ಜಗತ್ತಿನ ಇತಿಹಾಸವನ್ನು ತಿಳಿಸುವಂತೆ ಮಾಡಬೇಕಾಗಿದೆ. ನಮ್ಮ ಹಿರಿಯನ್ನು ಸ್ಮರಿಸುವ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಮಕ್ಕಳು, ಮೊಮ್ಮಕ್ಕಳನ್ನು ತೊಡಗಿಸಬೇಕು. ಆಗ ಮಕ್ಕಳಿಗೆ ಪೂರ್ವಿಕರ ಮತ್ತು ಕುಟುಂಬದ ಇತಿಹಾಸ ತಿಳಿಯುತ್ತದೆ ಎಂದು ತಿಳಿಸಿದರು.
ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಕೋಟಿ ಜೀವರಾಶಿಗಳಲ್ಲಿ ಮನುಷ್ಯನ ಜನ್ಮ ಶ್ರೇಷ್ಠವಾಗಿದೆ. ಹಲವು ಜೀವನರಾಶಿಗಳ ಪೈಕಿ ದೇವರು ಮನುಷ್ಯನಿಗೆ ಮಾತನಾಡುವ ಶಕ್ತಿ ಕೊಟ್ಟಿದ್ದಾನೆ. ಮನುಷ್ಯ ಮೋಕ್ಷ ಪಡೆದರೆ ಮಾತ್ರ ಜನ್ಮ ಸಾರ್ಥಕ್ಷೃ ಪಡೆದಂತೆ. ಆದರೆ, ಮನುಷ್ಯ ಹೆಣ್ಣು, ಹೊನ್ನು, ಮಣ್ಣು, ಅಧಿಕಾರದ ಹಿಂದೆ ಹೋಗಿ ರಾಕ್ಷಸ ಗುಣ ಬೆಳೆಸಿಕೊಳ್ಳುತ್ತಿದ್ದಾನೆ ಎಂದು ವಿಷಾದಿಸಿದರು.
ಮರಿದೇವೇಗೌಡರು ರಾಜಕೀಯ, ಸಹಕಾರಿ ಕ್ಷೇತ್ರ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದಾರೆ. ಅವರು ಕಾಲವಾದ ಬಳಿಕ ಅವರ ಮಕ್ಕಳು ಟ್ರಸ್ಟ್ ನಿರ್ಮಿಸಿಕೊಂಡು ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದು, ಜಾನಪದ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ ಅವರನ್ನು ಗುರುತಿಸಿ ಜನಸೇವಾ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಉತ್ತಮವಾದ ಕೆಲಸವಾಗಿದೆ ಎಂದು ಬಣ್ಣಿಸಿದರು.
ಪ್ರಶಸ್ತಿ ಪುರಸ್ಕೃತ ಕ್ಯಾತನಹಳ್ಳಿ ರಾಮಣ್ಣ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಸಜ್ಜನ ರಾಜಕಾರಣಿಗಳಿಗಿಂತ ಸುಳ್ಳುಗಳನ್ನು ಸತ್ಯವೆಂದು ಹೇಳುವ ಸತ್ಯವಂತ ರಾಜಕಾರಣಿಗಳ ಸಂಖ್ಯೆಯೇ ಹೆಚ್ಚಾಗಿದೆ. ರಾಜಕಾರಣಿಗಳ ಬದುಕು ಹೆಚ್ಚಾಗಿ ಹಗರಣಗಳಲ್ಲಿಯೇ ಮುಳುಗಿ ಹೋಗುತ್ತಿದೆ. ಮಾಧ್ಯಮಗಳಲ್ಲಿ ದಿನ ಬೆಳಗಾದರೆ ಬರೀ ಹಗರಣಗಳ ಬಗ್ಗೆಯೇ ಹೆಚ್ಚು ಸುದ್ದಿಯಾಗುತ್ತಿವೆ. ರಾಜಕೀಯ ಕ್ಷೇತ್ರದ ಜತೆಗೆ ಇತ್ತೀಚೆಗೆ ಸಾಹಿತ್ಯ ಕ್ಷೇತ್ರಕ್ಕೂ ಹಗರಣಗಳು ಸೋಂಕು ತಗಲಿದೆ ಎಂದು ಬೇಸರಿಸಿದರು.
ಇದೇ ವೇಳೆ ಜಾನಪದ ವಿದ್ವಾಂಸ ಡಾ.ಕ್ಯಾತನಹಳ್ಳಿ ರಾಮಣ್ಣ, ಪತ್ನಿ ರುಕ್ಮುಣಿ ಅವರಿಗೆ ‘ಶ್ರೀಮರಿದೇವೇಗೌಡ ಸ್ಮಾರಕ ಜನಸೇವಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುಶೀಲಮ್ಮ ಮರಿದೇವೇಗೌಡ, ಜಿಪಂ ಮಾಜಿ ಸದಸ್ಯ ಬಸವೇಗೌಡ, ಪಟೇಲ್ ವೆಂಕಟೇಗೌಡ, ಡಿ.ಕೆ.ದೇವೇಗೌಡ, ಚಿಕ್ಕರಾಮಾಂಜೇಗೌಡ, ನಾಗರಾಜು, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಕೆಪಿಸಿಸಿ ಪ್ರಧಾನ ಕಾರ್ದಯರ್ಶಿ ಎಚ್.ತ್ಯಾಗರಾಜು, ಟಿಎಪಿಸಿಎಂಎಸ್ ನಿರ್ದೇಶಕ ಸಿ.ಎಂ.ಶ್ರೀಕಾಂತ್, ಸಿ.ಎಂ.ಶ್ರೀನಾಥ್, ಡಾ.ಸಿ.ಎಂ.ಶ್ರೀಧರ್ ಇತರರು ಇದ್ದರು.