

ಶಿರಸಿ: ಉತ್ತರ ಕನ್ನಡದ ಮಲೆನಾಡು ಪ್ರದೇಶದಲ್ಲಿ ಬೆಳೆದ ಕಾಫಿ ಅತ್ಯುತ್ತಮ ಗುಣಮಟ್ಟ ಹೊಂದಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಕಾಫಿ ಬೆಳೆಗೆ ಇಲ್ಲಿ ಉತ್ತಮ ಅವಕಾಶವಿದ್ದು, ರೈತರು ಇದರ ಲಾಭ ಪಡೆಯಬಹುದಾಗಿದೆ ಎಂದು ಬಾಳೆಹೊನ್ನೂರು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕ ಡಾ.ಜೆ.ಎಸ್. ನಾಗರಾಜ ಹೇಳಿದರು.
ನಗರದ ಟಿಎಂಎಸ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಫಿ ಮತ್ತು ಕಾಳುಮೆಣಸು ಬೆಳೆ ಮಾಹಿತಿ ಕಾರ್ಯಾಗಾರದಲ್ಲಿ ‘ಕಾಫಿಯಲ್ಲಿ ಸುಧಾರಿತ ಕೃಷಿ ಪದ್ಧತಿ’ ಕುರಿತು ಮಾತನಾಡಿದರು. ಜಗತ್ತಿನಾದ್ಯಂತ ಕಾಫಿ ಅತ್ಯಂತ ಬೇಡಿಕೆಯ ಪೇಯ. 80 ದೇಶಗಳಲ್ಲಿ ಕಾಫಿ ಬೆಳೆಯಲಾಗುತ್ತಿದ್ದರೂ ಭಾರತೀಯ ಕಾಫಿಗೆ ಸದಾ ಬೇಡಿಕೆ ಇದೆ. ಭಾರತದ ಶೇ. 70ರಷ್ಟು ಕಾಫಿ ಕರ್ನಾಟಕದಲ್ಲಿ ಉತ್ಪಾದನೆ ಆಗುತ್ತಿದೆ. ಶೇ.80ರಷ್ಟು ಕಾಫಿ ಇಲ್ಲಿಯೇ ಖರ್ಚಾಗುತ್ತದೆ. ಆದ್ದರಿಂದ ಎಷ್ಟೇ ಉತ್ಪಾದಿಸಿದರೂ ಮಾರುಕಟ್ಟೆ ಸಮಸ್ಯೆಯಾಗುವುದಿಲ್ಲ ಎಂದರು.
ಸಸ್ಯತಳಿ ಶಾಸ್ತ್ರ ವಿಜ್ಞಾನಿ ಡಾ. ಶ್ರೀಹರ್ಷ ಅವರು ಚಂದ್ರಗಿರಿ ಕಾಫಿ ತಳಿ ಬಗ್ಗೆ ವಿವರಿಸಿ, ಇದು ಅರೆ ಕುಬ್ಜ ತಳಿಯಾಗಿದ್ದು, ಅಡಕೆ ತೋಟದಲ್ಲಿ ಬೆಳೆಸಲು ಅತ್ಯುತ್ತಮವಾಗಿದೆ. ಇದನ್ನು ಕಡಿಮೆ ಅಂತರದಲ್ಲಿ ನಾಟಿ ಮಾಡಬಹುದು. ಇದರ ಗುಣಮಟ್ಟ ಚೆನ್ನಾಗಿದ್ದು, ಸದ್ಯ ಇದಕ್ಕೆ ಈ ಭಾಗದಲ್ಲಿ ಯಾವುದೇ ರೋಗ- ಕೀಟದ ಬಾಧೆ ತೀವ್ರವಾಗಿ ಕಂಡು ಬಂದಿಲ್ಲ ಎಂದರು.
ಕಾಳುಮೆಣಸಿನ ಪ್ರಗತಿಪರ ಬೆಳೆಗಾರ ಡಾ. ರಾಜೇಂದ್ರ ಹೆಗಡೆ ಸಾಲ್ಕಣಿ ಮಾತನಾಡಿ, ಅಡಕೆಯಲ್ಲಿ ಉಪ ಬೆಳೆಗಳನ್ನು ಬೆಳೆಯುವುದರಿಂದ ಕೃಷಿ ವೆಚ್ಚಗಳನ್ನು ಸರಿದೂಗಿಸಲು ಸಹಾಯಕವಾಗುತ್ತದೆ. ನೀರಾವರಿ ವ್ಯವಸ್ಥೆ ಇದ್ದಲ್ಲಿ ಮಾತ್ರ ಕಸಿ ಕಾಳುಮೆಣಸು ಬೇಸಾಯ ಮಾಡುವುದು ಉತ್ತಮ. ಎಲೆಗಳಿಗೆ ಪೋಷಕಾಂಶ ಸಿಂಪರಣೆ ಮಾಡುವುದರಿಂದ ಇಳುವರಿ ಹೆಚ್ಚಿಸಬಹುದು ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ ಮಾತನಾಡಿ, ಈ ಭಾಗದಲ್ಲಿ ಸಸ್ಯ ಸಂತೆಗಳ ಮೂಲಕ ಸಸ್ಯಾಭಿವೃದ್ಧಿ ಕೆಲಸವನ್ನು ಸಹಕಾರಿ ಸಂಘ ಸಂಸ್ಥೆಗಳು ಮಾಡುತ್ತಿವೆ. ಜತೆಯಲ್ಲಿ ಕೃಷಿ ತರಬೇತಿಯನ್ನೂ ನೀಡುತ್ತಿವೆ. ತಲತಲಾಂತರದಿಂದ ಕಾಳುಮೆಣಸು ಬೆಳೆಯಲಾಗುತ್ತಿದೆ. ವೈಜ್ಞಾನಿಕ ಪದ್ಧತಿ ಮೂಲಕ ಹೇಗೆ ಬೆಳೆಯಬಹುದು, ರೋಗಬಾಧೆಯನ್ನು ಹೇಗೆ ತಡೆಗಟ್ಟಬಹುದು ಎಂಬುದನ್ನು ಕಾರ್ಯಾಗಾರದ ಮೂಲಕ ತಿಳಿಸಲಾಗುತ್ತಿದೆ ಎಂದರು.
ಬೇಸಾಯ ಶಾಸ್ತ್ರ ಮುಖ್ಯಸ್ಥ ಡಾ. ಬಾಬು, ನಿರ್ದೇಶಕ ಜಿ.ಎಂ. ಹೆಗಡೆ ಹಳಗೋಳ, ಉಪಾಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ವಿನಯ ಎನ್. ಹೆಗಡೆ ಮಂಡೇಮನೆ ಉಪಸ್ಥಿತರಿದ್ದರು. ನಿರ್ದೇಶಕ ಎಂ.ಎನ್. ಭಟ್ಟ ಬಿಸ್ಲಕೊಪ್ಪ ಸ್ವಾಗತಿಸಿದರು. ನಿರ್ದೇಶಕ ರವಿ ಜಿ. ಹೆಗಡೆ ಹುಳಗೋಳ ವಂದಿಸಿದರು.