

ಚಿಕ್ಕಮಗಳೂರು: ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆರ್ಥಿಕ ಮುಂತಾದ ಬದಲಾವಣೆ ಭದ್ರಬುನಾದಿ ಹಾಕಿದವರು ದೇವರ ದಾಸಿಮಯ್ಯ ಎಂದು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಕೆ.ಶ್ರೀನಿವಾಸ್ ಹೇಳಿದರು.
ನಗರದ ಶ್ರೀಪೇಟೆ ಆಂಜನೇಯ ಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ದೇವಾಂಗ ಸಂಘ, ಬನಶಂಕರಿ ಮಹಿಳಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ 1044ನೇ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮೌಡ್ಯ, ಕಂದಾಚಾರದ ವಿರುದ್ಧ ಕ್ರಾಂತಿಕಾರಕ ಹೆಜ್ಜೆನಗಳನ್ನಿಟ್ಟ ಶರಣರು ವೈಚಾರಿಕ ಚಿಂತನೆಗಳ ಮೂಲಕ ಜನರಿಗೆ ಅರಿವಿನ ದಾರಿ ತೋರಿದ್ದರು.ಮನುಷ್ಯನಲ್ಲಿರುವ ಅಹಂಕಾರ ತೊರೆದು ಭಕ್ತಿ ಮಾರ್ಗದಲ್ಲಿ ನಡೆದಾಗ ಮಾತ್ರ ಭಗವಂತನ ಸಾಕ್ಷಾತ್ಕಾರವಾಗಲಿದೆ ಎಂಬ ತತ್ವವನ್ನು ಸಾರಿದ್ದರು ಎಂದು ವಿವರಿಸಿದರು.
ವಚನಗಳ ಮೂಲಕ ಸಮಾಜದ ಅಂಕುಡೊಂಡುಗಳನ್ನು ತಿದ್ದುವ ಕೆಲಸ ಮಾಡಿದ ದೇವರ ದಾಸಿಮಯ್ಯ 10ನೇ ಶತಮಾನದ ಆದ್ಯ ವಚನಕಾರ. ಸ್ತ್ರೀ ಸಮಾನತೆ ಬಗ್ಗೆ ಒತ್ತಿ ಹೇಳಿದ್ದಲ್ಲದೆ ಕಾಯಕದ ಮಹತ್ವ ತಿಳಿಸಿ ಜಾತೀಯತೆ ಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಮಹಾಜ್ಞಾನಿ ಎಂದು ಬಣ್ಣಿಸಿದರು.
ಜಾತಿ, ವರ್ಗ, ಲಿಂಗತ್ವ ವರ್ಗೀಕರಣದಲ್ಲಿ ರಚನೆಯಾಗಿದ್ದ ಸಮಾಜದಲ್ಲಿನ ಕಂದಾಚಾರ, ಮೌಡ್ಯ , ಅಂಧ ಶ್ರದ್ಧೆಗಳ ಬಗ್ಗೆ ದನಿಎತ್ತಿದವರು ದೇವರ ದಾಸಿಮಯ್ಯ. ಜನ ಸಾಮಾನ್ಯರ ಬದುಕು, ಭಾವನೆಗಳನ್ನು ಕಾವ್ಯವನ್ನಾಗಿಸಿ ತಮ್ಮ ಅನುಭವದ ಮೂಲಕ ವಚನಗಳನ್ನು ರಚಿಸಿ ಕಾಯಕದ ಮಹತ್ವವನ್ನು ತಿಳಿಸಿದ ವಚನಕಾರರು ಎಂದರು.