

ಭದ್ರಾವತಿ: ಇಡೀ ದೇಶದಲ್ಲಿ ಎಲ್ಲಿಯೂ ಜಾರಿಯಾಗದ ಗೃಹಲಕ್ಷ್ಮೀ ಯೋಜನೆಯನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು ಇದರ ಸದುಪಯೋಗವನ್ನು ಎಲ್ಲ ಗೃಹಿಣಿಯರು ಪಡೆದುಕೊಳ್ಳಬೇಕು ಎಂದು ನಗರಸಭೆ ಸದಸ್ಯ ಬಿ.ಕೆ.ಮೋಹನ್ ಹೇಳಿದರು.
ಗೃಹಲಕ್ಷ್ಮೀ ಯೋಜನೆಗೆ ಹಳೇನಗರದ ವೀರಶೈವ ಸಭಾ ಭವನದಲ್ಲಿ ಚಾಲನೆ ನೀಡಿ ಮಾತನಾಡಿ, ಸರ್ಕಾರ ತನ್ನ 100 ದಿನಗಳ ಅಧಿಕಾರಾವಧಿಯಲ್ಲಿ ಚುನಾವಣೆಗೂ ಮುನ್ನ ನೀಡಲಾಗಿದ್ದ ಭರವಸೆಯಂತೆ ಈಗಾಗಲೇ 4 ಯೋಜನೆಗಳನ್ನು ಜಾರಿಗೊಳಿಸಿರುವುದು ಹೆಮ್ಮೆ ಪಡುವಂತಹ ವಿಚಾರವಾಗಿದೆ ಎಂದರು.
ಗಹಲಕ್ಷ್ಮೀ ಯೋಜನೆಯು ಒಂದು ತಿಂಗಳಿಗೆ ಮಾತ್ರ ಸೀಮಿತವಾದ ಯೋಜನೆಯಲ್ಲ. ಇದು ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಯೋಜನೆಯಾಗಿದ್ದು ಪಡೆದ ಹಣವನ್ನು ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ದಿನನಿತ್ಯದ ಜೀವನಕ್ಕೆ ಬಳಸಿಕೊಂಡು ನೆಮ್ಮದಿಯ ಜೀವನ ನಡೆಸಿದರೆ ಸರ್ಕಾರದ ಯೋಜನೆ ಸಾರ್ಥಕಗೊಂಡಂತಾಗುತ್ತದೆ ಎಂದರು.
ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಈಗಾಗಲೆ ಬಸ್ಸುಗಳ ಪ್ರಯಾಣ ಉಚಿತ ಮಾಡಿದ್ದು ಈಗ ನಿಮ್ಮ ಬ್ಯಾಂಕ್ ಖಾತೆಗೆ 2 ಸಾವಿರ ಹಣವನ್ನು ಜಮಾ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ನಿರ್ಮಿಸಲಾಗುತ್ತಿರುವ ಗುಂಪು ಮನೆಗಳ ನಿರ್ಮಾಣಕ್ಕೆ ಹಾಗೂ 5 ಸಾವಿರ ಮನೆಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ರಾಜ್ಯದ ಮಂತ್ರಿಗಳು ಬಂದು ಚಾಲನೆ ನೀಡಲಿದ್ದಾರೆ. ಸರ್ಕಾರ ಕೊಟ್ಟ ಯೋಜನೆಗಳು ಹಾಗೂ ಮಾಡಿದ ಸಹಾಯವನ್ನು ಜನ ಎಂದಿಗೂ ಮರೆಯಬಾರದು. ಕ್ಷೇತ್ರದ ಜನತೆಯ ಒಳಿತಿಗಾಗಿ ಶ್ರಮಿಸುತ್ತಿರುವ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಸುರೇಶ್ ಮಾತನಾಡಿ, ಯೋಜನೆಗೆ ತಾಲೂಕಿನಲ್ಲಿ 69 ಸಾವಿರ ಮಹಿಳೆಯರು ಅರ್ಜಿ ಸಲ್ಲಿಸಿದ್ದು ಎಲ್ಲ ಲಾನುಭವಿಗಳು ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.
ಪೌರಾಯುಕ್ತ ಮನುಕುಮಾರ್. ತಹಸೀಲ್ದಾರ್ ನಾಗರಾಜ್, ಡಾ, ಎಂ.ಆರ್.ಅಶೋಕ್, ಅನುಪಮಾ ಚನ್ನೇಶ್, ಶಕುಂತಲಾ ನಾರಾಯಣಪ್ಪ, ಎಸ್.ಕುಮಾರ್, ರಾಜ್‌ಕುಮಾರ್ ಇತರರ‌್ದಿರು. ಮೈಸೂರಿನ ಕಾರ್ಯಕ್ರಮದ ನೇರಪ್ರಸಾರವನ್ನು ನೂರಾರು ಗೃಹಿಣಿಯರು ವೀಕ್ಷಣೆ ಮಾಡಿದರು. ನಗರಸಭಾ ವ್ಯಾಪ್ತಿಯ 9, ಗ್ರಾಪಂ ವ್ಯಾಪ್ತಿಯ 39 ಹಾಗೂ ಹೊಳೆಹೊನ್ನೂರಿನ ಎರಡು ಕಡೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.