ಹುತಾತ್ಮರನ್ನು ಸ್ಮರಿಸುವ ಮಹತ್ತರ ದಿನ

15blrp8
Published on

ಬೇಲೂರು: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಹಾಗೂ ಗೌರವಿಸುವ ಈ ದಿನ ಭಾರತೀಯರಾದ ನಮ್ಮ ಪಾಲಿಗೆ ಮಹತ್ತರವಾದ ದಿನವಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.


ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗರುವಾರ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನ ತ್ಯಾಗ ಬಲಿದಾನದ ಮೂಲಕ ದೇಶವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಿದ ಮಹಾನೀಯರ ಹೋರಾಟವೇ ಇಂದಿನ ಆಚರಣೆಗೆ ಕಾರಣವಾಗಿದೆ. ಮೊದಲು ದೇಶ, ನಂತರ ಉಳಿದದ್ದು. ಸ್ವಾತಂತ್ರ್ಯ ಸ್ವೇಚ್ಛಚಾರವಲ್ಲ ಎಂಬುದನ್ನು ಅರಿತು ಸ್ವಾತಂತ್ರ್ಯವನ್ನು ಇತರರಿಗೆ ಅಡ್ಡಿಯಾಗದಂತೆ ಬಳಸಿ ಕೊಳ್ಳಬೇಕು ಎಂದರು.


ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಎಂ.ಮಮತಾ, ಇಂದು ನಾವೆಲ್ಲರೂ ಶಾಂತಿಯುತ ಜೀವನ ನಡೆಸುತ್ತಿರುವುದಕ್ಕೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವೇ ಕಾರಣ. ತ್ರಿವರ್ಣ ದ್ವಜದಡಿ ಭಾರತೀಯರಾದ ನಾವು ಜಾತಿ, ಧರ್ಮ, ವರ್ಗ, ಪ್ರಾದೇಶಿಕ, ಭಿನ್ನತೆ, ಭಾಷೆ, ಸಾಂಸ್ಕೃತಿಕ ವೈವಿಧ್ಯತೆಗಳಿದ್ದರೂ ನಾವೆಲ್ಲ ಭಾರತಾಂಬೆಯ ಮಕ್ಕಳು ಎಂದರು.


ಪುರಸಭೆ ಸದಸ್ಯರಾದ ಜಮಾಲೂದ್ದೀನ್, ಪ್ರಭಾಕರ್, ಕಸಾಪ ತಾಲೂಕು ಅಧ್ಯಕ್ಷ ಮಾ.ನಾ.ಮಂಜೇಗೌಡ, ತಾಪಂ ಇಒ ಸತೀಶ್, ಬಿಇಒ ರಾಜೇಗೌಡ, ಪುರಸಭೆ ಮುಖ್ಯಾಧಿಕಾರಿ ಸುಜಯ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.


ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳ ನೃತ್ಯ ಹಾಗೂ ಪಥಸಂಚಲನ ನೆರೆದಿದ್ದವರ ಗಮನ ಸೆಳೆಯಿತು. ಜತೆಗೆ ನಿವೃತ್ತ ಯೋಧರು ಮತ್ತು ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net