

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆ ಶ್ರೀ ಜನಾರ್ದನ ಕ್ಷೇತ್ರದ ಪರಿಸರದಲ್ಲಿ ನಡೆಯುತ್ತಿರುವ ಯಕ್ಷಭಾರತಿಯ ಕಲಾ ಸೇವೆ ಮತ್ತು ಸಾಮಾಜಿಕ ಸೇವಾ ಕಾರ್ಯ ಅಭಿನಂದನೀಯ. ಯಕ್ಷಭಾರತಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದು, ರಾಜ್ಯದಲ್ಲಿ ಗುರುತಿಸುವಂತಾಗಲಿ ಎಂದು ಉಜಿರೆ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.
ಉಜಿರೆಯ ರಾಮಕೃಷ್ಣ ಸಭಾಮಂಟಪದಲ್ಲಿ ನಡೆದ ಯಕ್ಷ ಭಾರತಿ ದಶಮಾನೋತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ಹಾಗೂ ದೇವಳದ ಯಕ್ಷ ಭಾರತಿ ಪ್ರಶಸ್ತಿ ಮತ್ತು ಸೇವಾ ಗೌರವ ಪ್ರದಾನ ಮಾಡಿ ಮಾತನಾಡಿದರು.
ಸಬ್ಬಣಕೋಡಿ ರಾಮಭಟ್ ಅವರಿಗೆ ಯಕ್ಷ ಭಾರತಿ ಪ್ರಶಸ್ತಿ, ಶೌರ್ಯ ತಂಡಕ್ಕೆ ದಶಮಾನೋತ್ಸವ ಸೇವಾ ತಂಡ ಗೌರವ, ಎಸ್ಕೆಡಿಆರ್ಡಿಪಿ ಪ್ರಾದೇಶಿಕ ನಿರ್ದೇಶಕ ವಿವೇಕ್.ವಿ.ಪಾಯ್ಸ ಮತ್ತು ಎಕ್ಸೆಲ್ ಪ.ಪೂ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ ಜೈನ್ ಅವರಿಗೆ ಯುವ ಸಾಧನಾ ಪುರಸ್ಕಾರ, ನಿವೃತ್ತ ಆರೋಗ್ಯ ಸಹಾಯಕಿರಾದ ಭುವನೇಶ್ವರಿ ಕುಂಟಿನಿ ಮತ್ತು ದೇವಮ್ಮ ಅವರಿಗೆ ಆರೋಗ್ಯ ಸೇವಾ ಗೌರವ, ಅದ್ವಿತಿ ರಾವ್ ಅವರಿಗೆ ಬಾಲಸೇವಾ ಪ್ರಶಸ್ತಿ ನೀಡಲಾಯಿತು. ಅಭಿಜಿತ್ ಮುಂಡಾಜೆ ಮತ್ತು ಮೋನಿಷ ನೀರ ಚಿಲುಮೆ ಅವರಿಗೆ ವಿದ್ಯಾನಿಧಿ ವಿತರಿಸಲಾಯಿತು.
ಯಕ್ಷ ಭಾರತಿ ಟ್ರಸ್ಟಿಗಳಾದ ಹರೀಶ್ ರಾವ್ ಮುಂಡ್ರುಪ್ಪಾಡಿ, ಶಿತಿಕಂಠ ಭಟ್ ಉಜಿರೆ, ಕೃಷ್ಣ ಡಿ.ಕನ್ಯಾಡಿ, ಗುರುಪ್ರಸಾದ್ ಉಜಿರೆ, ನಿವೃತ್ತ ಮುಖ್ಯಶಿಕ್ಷಕರಾದ ರಾಮಕೃಷ್ಣ ಭಟ್ ಚೊಕ್ಕಾಡಿ, ಮುರಲೀಕೃಷ್ಣ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ದಿವಾಕರ ಆಚಾರ್ಯ ಪ್ರಸ್ತಾವನೆಗೈದರು. ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸ್ವಾಗತಿಸಿ, ರವೀಂದ್ರ ಶೆಟ್ಟಿ ಬಳೆಂಜ ವಂದಿಸಿದರು. ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರೂಪಿಸಿದರು.