ಕೊಪ್ಪಳ ಶ್ರೀ ಪ್ರವಚನದಿಂದ ಮಹತ್ತರ ಬದಲಾವಣೆ

Koppala Shree Pravachana
Published on

ಬ್ಯಾಡಗಿ: ಭಾರತೀಯ ಸಂಸ್ಕೃತಿ, ಸನಾತನ ಧರ್ಮ ವಿಶ್ವಕ್ಕೆ ಬೆಳಕು ನೀಡಿದ್ದು, ದಾರ್ಶನಿಕ ಹಾಗೂ ಆಚಾರ್ಯ ಪರಂಪರೆಗಳನ್ನು ಧರ್ಮಗುರುಗಳು ಎಲ್ಲೆಡೆ ಪ್ರವಚನ, ಧರ್ಮಸಭೆಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಕಣ್ವಕುಪ್ಪಿ ಮಠದ ಡಾ. ನಾಲ್ವಡಿ ಶಾಂತಲಿಂಗ ಶ್ರೀಗಳು ತಿಳಿಸಿದರು.

ಪಟ್ಟಣದ ಎಸ್​ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ನ. 13ರಿಂದ 24ರ ವರೆಗೆ 12 ದಿನಗಳ ಕಾಲ ಜರುಗುತ್ತಿರುವ ಪ್ರವಚನ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಭಾರತದಲ್ಲಿ ಧರ್ಮಪೀಠಗಳು, ಜಾಗೃತಿ ಕೇಂದ್ರಗಳು ಹಾಗೂ ಮಠಮಂದಿರಗಳು ಧರ್ಮಪ್ರಸಾರ ಮಾಡುವ ಮೂಲಕ ಭಕ್ತ ಸಮೂಹದಲ್ಲಿ ನಿತ್ಯ ಜಾಗೃತಿ ಮೂಡಿಸುತ್ತಿವೆ. ಮಠಗಳು ಸನಾತನ ಕಾಲದಿಂದಲೂ ತ್ರಿವಿಧ ದಾಸೋಹ ಮುನ್ನಡೆಸಿವೆ. ವ್ಯಾಸ ಮಹರ್ಷಿಗಳು ರಚಿಸಿದ 18 ಪುರಾಣಗಳಲ್ಲಿಯೂ ಪರೋಪಕಾರ, ಪುಣ್ಯ ಹಾಗೂ ಬದುಕಿನ ಸಿದ್ಧಾಂತಗಳ ಕುರಿತು ಬರೆಯಲಾಗಿದೆ. ನಾವೆಲ್ಲರೂ ದುರ್ಗಣಗಳನ್ನು ತೊರೆದು, ಸದಾಚಾರ ಅಳವಡಿಸಿಕೊಳ್ಳಬೇಕು. ಕೊಪ್ಪಳದ ಶ್ರೀಗಳು 12 ದಿನಗಳ ಕಾಲ ನಡೆಸಿಕೊಡುವ ಪ್ರವಚನದಿಂದ ಬ್ಯಾಡಗಿ ನಗರದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಮೆಣಸಿನಕಾಯಿ ಖಾರದ ನಾಡಿನಲ್ಲಿ ಶ್ರೀಗಳ ಮಾತಿನಿಂದ ಮನಸುಗಳು ಸಿಹಿಯಾಗುವ ಮೂಲಕ ಎಲ್ಲರ ಬದುಕು ಬದಲಾಗಬೇಕಿದೆ ಎಂದರು.

ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಜನರಲ್ಲಿ ತುಂಬಿರುವ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕು ನೀಡುವ ಉದ್ದೇಶದಿಂದ 12 ದಿನಗಳ ಕಾಲ ಪ್ರವಚನ ನಡೆಸಲು ಸ್ಥಳೀಯ ಸೇವಾ ಸಮಿತಿಯವರು ಹಗಲಿರುಳೆನ್ನದೆ ಶ್ರಮಿಸಿದ್ದಾರೆ. ಶತಮಾನಗಳ ಹಿಂದೆ ಇಲ್ಲಿನ ಮುಪ್ಪಿನೇಶ್ವರ ಮಠದ ಮಹಾತಪಸ್ವಿಗಳು ದೊಡ್ಡ ಕ್ರೀಡಾಂಗಣವನ್ನು ದಾನವಾಗಿ ನೀಡುವ ಮೂಲಕ ಆ ಸಮಯದಲ್ಲಿ ಇಂತಹ ಅದ್ಭುತ ಕಾರ್ಯಕ್ರಮಗಳು ಈ ನೆಲದಲ್ಲಿ ನಡೆಯಬೇಕೆಂದು ಸಂಕಲ್ಪ ಮಾಡಿದ್ದರು. ಅಂತಹ ಶರಣರ ಇಚ್ಛೆಯಂತೆ ಐತಿಹಾಸಿಕ ಧಾರ್ವಿುಕ ಕಾರ್ಯಕ್ರಮ ನಡೆಯುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ ಎಂದರು.

ಸದ್ಭಾವನಾ ಯಾತ್ರೆ ಇಂದು

ನ. 14ರಂದು ಬ್ಯಾಡಗಿ ನಗರದ ಚಂದ್ರಗುತ್ತೆಮ್ಮದೇವಿ ದೇವಸ್ಥಾನದಿಂದ ಸದ್ಭಾವನಾ ಯಾತ್ರೆ ಪ್ರಾರಂಭವಾಗಿ ಮದಗಮ್ಮನ ದೇವಸ್ಥಾನ, ತಳವಾರ ಓಣಿ, ಹೊಂಡದ ಓಣಿ, ಸೋಗಿನ ಓಣಿ, ಪೋಸ್ಟ್ ಆಫೀಸ್ ರಸ್ತೆ ಮೂಲಕ ವಾಜಪೇಯಿ ರಂಗಮಂದಿರದಲ್ಲಿ ಮುಕ್ತಾಯವಾಗಲಿದೆ.

ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸಂಸ್ಥಾನ ಮಠದ ಶ್ರೀಗಳು, ಹೂವಿನ ಹಡಗಲಿ ಡಾ.ಹಿರಿಶಾಂತ ಶ್ರೀಗಳು, ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು, ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶಿವಲಿಂಗ ಶ್ರೀಗಳು, ತಿಪ್ಪಾಯಿಕೊಪ್ಪದ ಮಹಾಂತ ಶ್ರೀಗಳು, ಅಗಡಿ ಅಕ್ಕಿಮಠದ ಗುರುಲಿಂಗ ಶ್ರೀಗಳು, ನೆಗಳೂರು ಹಿರೇಮಠದ ಶಾಂತವೀರ ಶ್ರೀಗಳು, ಕೂಡಲಮಠದ ಗುರುಮಹೇಶ್ವರ ಶ್ರೀಗಳು, ಲಿಂಗನಾಯಕನಹಳ್ಳಿ ಜಂಗಮಕ್ಷೇತ್ರದ ಚನ್ನವೀರ ಶ್ರೀಗಳು, ಹೇರೂರಿನ ಗುಬ್ಬಿನಂಜುಂಡೇಶ್ವರ ಮಠದ ಶ್ರೀಗಳು, ಬಳಗಾನೂರಿನ ಶಿವಶಾಂತವೀರ ಶರಣರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net