

ಹೊಸಕೋಟೆ : ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಮೂಲಕ ಕನ್ನಡ ಭಾಷೆ, ಸಾಹಿತ್ಯ, ನಾಡು, ನುಡಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಸರ್ಕಾರದಿಂದ ಸಾಗುತ್ತಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜ ಆರ್ಟ್ಸ್ ಮುನಿರಾಜು ತಿಳಿಸಿದರು.
ತಾಲೂಕು ಕಚೇರಿ ಮುಂಭಾಗದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ಭಾನುವಾರ ಬರಮಾಡಿಕೊಂಡು ಪೂಜೆ ಸಲ್ಲಿಸಿ ಮಾತನಾಡಿದರು.
ಡಿಸೆಂಬರ್ 20, 21, ಹಾಗೂ 22ರಂದು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿಗೆ ಕನ್ನಡ ಜ್ಯೋತಿಹೊತ್ತ ರಥವು ಸಂಚಾರ ಮಾಡುತ್ತಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದ ಭವ್ಯತೆ ಸಾರಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಥವು ಅಲಂಕೃತಗೊಂಡು ಸಂಚಾರ ಮಾಡಿ ಸಮ್ಮೇಳನದ ಮಹತ್ವವನ್ನು ಕನ್ನಡಗಿರಲ್ಲಿ ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ ಎಂದರು.
ರಥದ ವೈಭವ
ಜ್ಯೋತಿ ಹೊತ್ತ ರಥದಲ್ಲಿ ತಾಯಿ ಭುವನೆಶ್ವರಿ ಪ್ರತಿಮೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಭಾರತ ರತ್ನ ಸರ್‌ಎಂ ವಿಶ್ವೇಶ್ವರಯ್ಯನವರ ಪ್ರತಿಮೆ ಎದ್ದು ಕಾಣುತ್ತಿದೆ. ರಥದ ಎಡ-ಬಲ ಭಾಗದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಹಿಂಭಾಗದಲ್ಲಿ ಎತ್ತುಗಳ ಜೊತೆ ಉಳುಮೆ ಮಾಡುವ ರೈತರ ಪ್ರತಿಮೆಗಳನ್ನು ನಿಲ್ಲಿಸಿದ್ದು ಗಮನ ಸೆಳೆಯುತ್ತಿದೆ. ಆದ್ದರಿಂದ ಸಮ್ಮೇಳನದ ಪ್ರಯುಕ್ತ ರಥದ ಮೂಲಕ ಒಚಿದು ರೀತಿಯ ಪ್ರಚಾರ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯವಾಗಿದ್ದು, ಇಂತಹ ಕನ್ನಡದ ಕೆಲಸಗಳಿಗೆ ಕನ್ನಡದ ಮನಸುಗಳು ಪಕ್ಷಾತೀತವಾಗಿ, ಧರ್ಮಾತೀತವಾಗಿ ಭಾಗವಹಿಸಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಸಿ.ಎನ್.ನಾರಾಯಣಸ್ವಾಮಿ ತಿಳಿಸಿದರು. ಹೊಸಕೋಟೆ ತಾಲೂಕು ಕಚೇರಿ ಆವರಣದಲ್ಲಿ ಕನ್ನಡ ಜ್ಯೋತಿ ಹೊತ್ತ ರಥದ ಮೆರವಣಿಗೆಗೆ ತಾಲೂಕು ಕಸಾಪ ಅಧ್ಯಕ್ಷ ರಾಜ ಆರ್ಟ್ಸ್ ಮುನಿರಾಜು, ಇಒ ಡಾ.ಸಿ.ಎನ್.ನಾರಾಯಣಸ್ವಾಮಿ ಚಾಲನೆ ನೀಡಿದರು. ಕಸಾಪ ಕಾರ್ಯದರ್ಶಿ ಬಚ್ಚೇಗೌಡ, ಹಿರಿಯ ಹೋರಾಟಗಾರ ಹೋ.ರಾ.ವೆಂಕಟೇಶ್, ಮುಖಂಡರಾದ ಗುಟ್ಟಹಳ್ಳಿ ನಾಗರಾಜ್, ಮುನಿರಾಜ್, ಮಾಕನಹಳ್ಳಿ ಮಂಜುನಾಥ್ ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಇದ್ದರು.