ಕನ್ನಡ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ

07 SARAG 1
ಸರಗೂರಿನ ಮಹಾವೀರ ಸರ್ಕಲ್‌ನ ಗಣಪತಿ ದೇವಸ್ಥಾನದ ಬಳಿ ಕನ್ನಡ ಜ್ಯೋತಿ ರಥವನ್ನು ಅದ್ದೂರಿಯಾಗಿ ಗಣ್ಯರು ಬರಮಾಡಿಕೊಂಡರು.
Published on

ಸರಗೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥವು ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಂಘ-ಸಂಸ್ಥೆಗಳ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ತಹಸೀಲ್ದಾರ್ ಮೋಹನಕುಮಾರಿ, ಇಒ ಪ್ರೇಮಕುಮಾರ್, ಕಬಿನಿ ನೀರಾವರಿ ಉಪವಿಭಾಗ ಎಇಇ ಕೆ.ಉಷಾ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಅದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಅವರು ಗುಂಡ್ಲುಪೇಟೆ ತಾಲೂಕಿನಿಂದ ಪಟ್ಟಣಕ್ಕೆ ಶನಿವಾರ ಬಂದ ಕನ್ನಡ ಜ್ಯೋತಿ ರಥವನ್ನು ಪಟ್ಟಣದ ಮಹಾವೀರ ಸರ್ಕಲ್‌ನ ಗಣಪತಿ ದೇವಸ್ಥಾನದ ಬಳಿ ಸ್ವಾಗತಿಸಿದರು. ರಥದಲ್ಲಿನ ಭುವನೇಶ್ವರಿ ಪ್ರತಿಮೆಗೆ ಹೂಮಾಲೆ ಹಾಕಿ, ಪುಷ್ಪಾರ್ಚನೆ ಮಾಡುವ ಮೂಲಕ ಬರಮಾಡಿಕೊಂಡರು.

ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿ, ಕನ್ನಡ ರಥ ಸಂಚರಿಸಿದಲ್ಲೆಲ್ಲ ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ನೆರೆದು ಸ್ವಾಗತ ಕೋರಿದ್ದಾರೆ. ಇದು ಕನ್ನಡಿಗರಲ್ಲಿ ಸ್ವಾಭಿಮಾನ ತುಂಬುವ ಮತ್ತು ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಕನ್ನಡ ನಾಡು, ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ, ನೃತ್ಯ, ಸಂಗೀತದಿಂದ ಉತ್ಕೃಷ್ಟ ಹಾಗೂ ಶ್ರೀಮಂತವಾಗಿದೆ. ಈ ನಾಡಿನ ಶಿಲ್ಪ ಕಲೆಗೆ ಮನಸೋಲದವರೇ ಇಲ್ಲ. ನಮ್ಮ ನೆಲ, ಜಲ ಮತ್ತು ಭಾಷೆ ಹಾಗೂ ಸಂಸ್ಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ ಮಾತನಾಡಿ, ಕರ್ನಾಟಕದಲ್ಲಿರುವ ನಾವೆಲ್ಲರೂ ಒಂದೇ. ಎಲ್ಲರೂ ಸಹೋದರ ಭಾವ ಹೊಂದಿರಬೇಕು. ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಕಲೆಯನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.

ಕರ್ನಾಟಕದ ಬಹುತೇಕ ಜನರಿಗೆ ಕನ್ನಡ ಮಾತೃಭಾಷೆ ಆಗಿದೆ. ಅಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ದಮನ್ ಮತ್ತು ದಿಯುಗಳಲ್ಲಿಯೂ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣನೀಯ ಕನ್ನಡಿಗರು ಇದ್ದಾರೆ ಎಂದು ಹೇಳಿದರು.

ರಥವನ್ನು ಬರಮಾಡಿಕೊಂಡ ನಂತರ ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ರಥ ಸಂಚರಿಸಿ ನಂತರ ಎಚ್.ಡಿ.ಕೋಟೆ ತಾಲೂಕಿಗೆ ತೆರಳಿತು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಪ್ರಧಾನ ಕಾರ್ಯದರ್ಶಿ ನಿಂಗರಾಜು, ಪಪಂ ಸದಸ್ಯ ಚೆಲುವ ಕೃಷ್ಣ, ಗ್ರಾಪಂ ಸದಸ್ಯರು ಕುರ್ಣೇಗಾಲ ಬೆಟ್ಟ ಸ್ವಾಮಿ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ವರ್ತಕರ ಸಂಘದ ಅಧ್ಯಕ್ಷ ಪ್ರತಾಪ್, ಎಪಿಎಂಸಿ ಕಾರ್ಯದರ್ಶಿ ವೆಂಕಟೇಶ್, ಮುಖಂಡರು ಚೆಲುವರಾಜು,ನಾಗರಾಜರಾಮ್, ಗ್ರಾಮೀಣ ಮಹೇಶ್, ಅಜೀತ್ ಕುಮಾರ್, ಶ್ರೀನಿವಾಸ, ಲಿಂಗಚಾರ್,ಗುತ್ತಿಗೆದಾರ ಬಸವರಾಜು, ವಸಂತ ಪಾಟೀಲ್, ಜವರನಾಯಕ , ಭಾಸ್ಕರ್, ವಸಂತಕುಮಾರ್, ಶಿಕ್ಷಕ ಬಂಗಾರಯ್ಯ, ಕಂದಾಯ ಇಲಾಖೆ ಸಿಬ್ಬಂದಿ ಮುಜೀಬ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net