

ಸವಣೂರ: ಬಿಗ್ಬಾಸ್ ಸಿಸನ್ 11ರ ವಿನ್ನರ್ ಆಗಿ ಪ್ರಥಮ ಬಾರಿಗೆ ತವರಿಗೆ ಆಗಮಿಸಿದ ಹನುಮಂತ ಲಮಾಣಿ ಅವರನ್ನು ಅಭಿಮಾನಿಗಳು ಹಾಗೂ ಗೆಳೆಯರು ಪಟಾಕಿ ಸಿಡಿಸಿ, ಸನ್ಮಾನಿಸುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿಕೊಂಡರು.
ಬಿಗ್ಬಾಸ್ ವಿನ್ನರ್ ಹನುಮಂತ ಅವರು ಹಾಡಿದ ಹಾಡನ್ನು ಡಿಜೆಯಲ್ಲಿ ಪ್ರಸಾರ ಮಾಡುವ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಪಟ್ಟಣದ ಭರಮಲಿಂಗೇಶ್ವರ ವೃತ್ತದಿಂದ ಪ್ರಾರಂಭಗೊಂಡ ಬಿಗ್ಬಾಸ್ ವಿನ್ನರ್ನ ಮೆರವಣಿಗೆ ಪಟ್ಟಣದ ಪ್ರಮೂಖ ಬೀದಿಗಳಲ್ಲಿ ಸಾಗಿ ತವರು ಗ್ರಾಮ ಚಿಲ್ಲೂರ ಬಡ್ನಿ ಗ್ರಾಮಕ್ಕೆ ಮುಕ್ತಾಯಗೊಂಡಿತು.
ಮೆರವಣಿಗೆ ಉದ್ದಕ್ಕೂ ಡಿಜೆ ಸಾಂಗ್, ಲಂಬಾಣಿ ಹಾಡುಗಳಿಗೆ ಹನುಮಂತನ ಅಭಿಮಾನಿಗಳು ಹಾಡಿ ಕುಣಿದು ಕುಪ್ಪಳಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಮೆರವಣಿಗೆಯುದ್ದಕ್ಕೂ ಅಭಿಮಾನಿಗಳಿಂದ ಅಭಿನಂದನೆ, ಸನ್ಮಾನ ಮಾಡುವುದು ಕಂಡು ಬಂದಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಗ್ಬಾಸ್ ವಿನ್ನರ್ ಹನುಮಂತ ಲಮಾಣಿ, ಗೆಲುವು ನನ್ನದಲ್ಲ, ಕರ್ನಾಟಕದ ಜನ ನನಗೆ ವೋಟು ಮಾಡಿದ್ದಕ್ಕೆ ಗೆದ್ದಿದ್ದೇನೆ. ಕರ್ನಾಟಕ ಜನರ ಆಶೀರ್ವಾದ ನನ್ನ ಮೇಲಿದೆ. ಅವರಿಗೆ ನಾನು ಅಭಾರಿಯಾಗಿದ್ದೇನೆ ಎಂದು ಕರ್ನಾಟಕದ ಜನತೆಗೆ ಅಭಿನಂದನೆ ತಿಳಿಸಿದರು.