

ಲೋಕಾಪುರ: ಪಟ್ಟಣಕ್ಕೆ ಆಗಮಿಸಿದ ರನ್ನ ವೈಭವ ರಥಯಾತ್ರೆಯನ್ನು ಪಟ್ಟಣ ಪಂಚಾಯತ ವತಿಯಿಂದ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಈ ಯಾತ್ರೆಯು ಚಿತ್ರದುರ್ಗ, ಹೊಸಪೇಟೆ ಮೂಲಕ ಬಾಗಲಕೋಟ ಜಿಲ್ಲೆಗೆ ಆಗಮಿಸಿದೆ. ಕಡು ಬಡತನದ ಬಳೆಗಾರ ವೃತ್ತಿಯ ಕುಟುಂಬದಿಂದ ಬಂದ ರನ್ನನು ಸಾಹಸಭೀಮ ವಿಜಯಂ, ಪರಶುರಾಮಚರಿತ, ಚಕ್ರೇಶ್ವರ ತೀರ್ಥ ಎಂಬ ಮಹಾನ್ ಕಾವ್ಯ ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಕವಿಚಕ್ರವರ್ತಿ, ಕವಿರತ್ನ, ಕವಿರಾಜಶೇಖರ, ಉಭಯಕವಿ ಎಂಬ ನಾಮವಳಿಗಳಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಉಪತಹಸೀಲ್ದಾರ್ ಬಿ.ಎಸ್. ರಂಗಣ್ಣವರ ಮಾತನಾಡಿ, ರನ್ನ ವೈಭವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಫೆ.22ರಂದು 10 ಗಂಟೆಗೆ ರನ್ನ ಬೆಳಗಲಿಯ ಬಂದಲಕ್ಷ್ಮೀ ದೇವಸ್ಥಾನದಿಂದ ಕವಿ ಚಕ್ರವರ್ತಿ ರನ್ನ ವೇದಿಕೆಯವರೆಗೆ ನಡೆಯಲಿರುವ ಜಾನಪದ ವಾಹಿನಿ ಕಲಾತಂಡಗಳ ಮೆರವಣೆಗೆಗೆ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡಲಿದ್ದಾರೆ ಎಂದರು.
ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಮಾತನಾಡಿ, ರನ್ನ ನಾಡು ಮುಧೋಳ, ರನ್ನ ಬೆಳಗಲಿ ಕವಿ ಚಕ್ರವರ್ತಿಯ ಸಾಂಸ್ಕೃತಿಕ ವೈಭವಕ್ಕೆ ಸಿದ್ಧಗೊಂಡಿದೆ. ಸಿನಿ ತಾರೆಯರು, ಖ್ಯಾತ ಗಾಯಕರು, ಸಂಗೀತ ನಿರ್ದೇಶಕರ ತಂಡವೇ ಮೇಳೈಸಲಿದ್ದು ಕನ್ನಡದ ಮನಸ್ಸುಗಳು, ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ ಎಂದರು.
ರನ್ನ ವೈಭವ ರಥೋತ್ಸವ ವೇಳೆ ಯೋಜನಾ ನಿರ್ದೇಶಕ ಜಿಲ್ಲಾ ನಗರಾಭಿವೃದ್ಧಿ ಕೋಶದ ಬಾಹುಸಾಹೇಬ ಸುರಕೋಡ, ಎಇಇಗಳಾದ ವೆಂಕಟೇಶ ಹುಣಶಿಗಿಡದ, ಶಂಭುಲಿಂಗ ಯಡಲಗಿ, ಗುರುರಾಜ ಉದಪುಡಿ, ಗೋವಿಂದ ಕೌಲಗಿ, ಅಬ್ದುಲ್ ರೆಹೆಮಾನ ತೊರಗಲ್, ಕೃಷ್ಣಾ ಹೂಗಾರ, ಸುಲ್ತಾನ ಕಲಾದಗಿ, ಸದಾಶಿವ ಉದಪುಡಿ, ಡಾ. ವಿನಯ ಕುಲಕರ್ಣಿ, ಭಾಗ್ಯಾಶ್ರೀ ಪಾಟೀಲ, ಷಣ್ಮೂಖಪ್ಪ ಕೊಲ್ಹಾರ, ಚನ್ನಯ್ಯ ಗಣಾಚಾರಿ, ರವಿ ರೊಡ್ಡಪ್ಪನವರ, ಭೀಮಶಿ ನಾವಲಗಿ, ಶಂಕರ ಪೂಜಾರ ಇದ್ದರು.