

ಔರಾದ್: ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಗೆ ಭಾನುವಾರ ಪಟ್ಟಣದಲ್ಲಿ ಶಾಸಕ ಪ್ರಭು ಚವ್ಹಾಣ್ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.
ಪಟ್ಟಣದ ಕೇಂದ್ರ ಬಸ್ ನಿಲ್ದಾಣ, ಶಿವಾಜಿ ವೃತ್ತ, ತಾಪಂ ಕಚೇರಿಯಿಂದ ಕನ್ನಡಾಂಬೆ ವೃತ್ತದ ತನಕ ರಥಯಾತ್ರೆ ಜರುಗಿ ಕೊನೆಗೆ ಸಂತಪುರ ಮಾರ್ಗವಾಗಿ ಬೀದರ್‌ಗೆ ಕಳುಹಿಸಲಾಯಿತು.
ಶಾಸಕ ಪ್ರಭು ಚವ್ಹಾಣ್ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಮಾಲಾರ್ಪಣೆ ಸಲ್ಲಿಸಿ ಗೌರವ ಸಮರ್ಪಿಸಿ, ತಮಟೆ ಬಾರಿಸುವುದರೊಂದಿಗೆ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ಕಟ್ಟುವ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು. ಕಚೇರಿ ಮತ್ತು ಅಂಗಡಿಗಳ ನಾಮಫಲಕಗಳಲ್ಲಿ ಶೇ.೬೦ರಷ್ಟು ಕನ್ನಡ ಭಾಷೆಯನ್ನು ಬಳಸಬೇಕೆಂದು ಸರ್ಕಾರದ ಆದೇಶವಿದೆ. ಆದರೆ ಶೇ.೧೦೦ರಷ್ಟು ಕನ್ನಡ ಬಳಕೆಯಾಗಬೇಕು. ಎಲ್ಲ ಕಚೇರಿಗಳಲ್ಲಿ ಕಡ್ಡಾಯ ಕನ್ನಡ ಭಾಷೆ ಬಳಸುವಂತಾಗಬೇಕು. ಈ ದಿಶೆಯಲ್ಲಿ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಬೇಕು. ಕನ್ನಡ ಭಾಷೆಯನ್ನು ತಾಯಿಯಂತೆ ಪ್ರೀತಿಸಬೇಕು ಎಂದು ಹೇಳಿದರು.
ಕನ್ನಡ ಭಾಷೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉತ್ತಮ ಕೆಲಸ ಮಾಡುತ್ತಿದೆ. ಸಮ್ಮೇಳನದ ಪ್ರಚಾರಕ್ಕಾಗಿ ಕನ್ನಡ ಜ್ಯೋತಿ ರಥಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ, ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಕೋರಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಔರಾದ(ಬಿ) ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಪ್ರೇಮಿಬಾಯಿ, ಶಿವಶಂಕರ ಟೋಕರೆ, ವಿಜಯಕುಮಾರ ಗೌರೆ, ಡಾ.ಶಾಲಿವಾನ ಉದಗೀರೆ, ಎಂ.ಎಸ್ ಮನೋಹರ್, ಜಗನಾಥ ಮೂಲಗೆ, ಅಧಿಕಾರಿಗಳಾದ ಸಂಗಯ್ಯ ಸ್ವಾಮಿ, ಮಾಣಿಕರಾವ ಪಾಟೀಲ್, ಶಿವಕುಮಾರ ಘಾಟೆ, ಪ್ರಕಾಶ ರಾಠೋಡ್, ಡಾ.ಗಾಯತ್ರಿ, ಪ್ರಮುಖರಾದ ಶಿವರಾಜ ಅಲ್ಮಾಜೆ, ಕೇರಬಾ ಪವಾರ್, ಅಶೋಕ ಅಲ್ಮಾಜೆ, ಬಸವರಾಜ ದೇಶಮುಖ, ಕಲ್ಲಪ್ಪ ದೇಶಮುಖ, ಸಂದೀಪ ಪಾಟೀಲ್, ಜಗನಾಥ ದೇಶಮುಖ, ಅಮೃತರಾವ ಬಿರಾದಾರ, ಅಶೋಕ ಶೆಂಬೆಳ್ಳಿ, ಮಹಾನಂದ ಎಂಡೆ, ಮಲ್ಲಪ್ಪ ಗೌಡ, ರಾಘವೇಂದ್ರ ಗೌಡ, ಬಸವರಾಜ ಶೆಟ್ಟಕಾರ, ರತ್ನ ದೀಪ ಇತರರಿದ್ದರು.