

ಬಾಗಲಕೋಟೆ: ಬಾಗಲಕೋಟೆಯ ಮಹಾಂತೇಶ್ ಚೊಳಚಗುಡ್ಡ ಕಥೆ ಬರೆದು ನಿರ್ಮಾಣ ಮಾಡಿರುವ ದೇಸಾಯಿ ಚಿತ್ರ ಶುಕ್ರವಾರ ಅದ್ದೂರಿಯಾಗಿ ಬಿಡುಗಡೆ ಆಗಿದೆ.
ಬಾಗಲಕೋಟೆ ನಗರದ ವಾಸವಿ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನಕ್ಕೂ ಮುನ್ನ ಸಂಭ್ರಮ, ಸಡಗರ ನಡೆಯಿತು. ಸ್ಥಳೀಯ ನಿರ್ಮಾಪಕ ಎನ್ನುವ ಕಾರಣಕ್ಕೆ ನಗರದ ಅನೇಕ ವೃದ್ಧರು, ಮಹಿಳೆಯರು, ಮಕ್ಕಳು ಸಹ ಮೊದಲ ಶೋ ವೀಕ್ಷಿಸಲು ಥಿಯೇಟರ್‌ಗೆ ಆಗಮಿಸಿದ್ದು, ವಿಶೇಷವಾಗಿತ್ತು. ಹಿರಿಯರು ಚಿತ್ರಕ್ಕೆ ಶುಭಹಾರೈಸಿ ಕುಂಬಳಕಾಯಿ ಒಡೆದರು. ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚಿತ್ರದಲ್ಲಿ ನಾಯಕನಾಗಿ ಪ್ರವೀಣಕುಮಾರ ಹಾಗೂ ನಾಯಕಿಯಾಗಿ ರಾಧ್ಯಾ ನಟಿಸಿದ್ದು, ಚಿತ್ರದ ಅತಿಥಿ ಪಾತ್ರದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಣಿಸಿಕೊಂಡಿದ್ದಾರೆ. ನಾಗಿರೆಡ್ಡಿ ಭಟ ನಿರ್ದೇಶನ, ಪಿ.ಕೆ.ಎಚ್. ದಾಸ್ ಛಾಯಾಗ್ರಹಣ, ಸಾಯಿ ಕಾರ್ತಿಕ್ ಸಂಗೀತ, ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಒದಗಿಸಿರುವ ದೇಸಾಯಿ ಚಿತ್ರಕ್ಕೆ ವಸಂತ್ ಶಾರದೆ ಚಿತ್ರಕಥೆ, ಸಂಭಾಷಣೆ ಇದೆ.
ಕೌಟುಂಬಿಕ ಕಥೆ ಹೊಂದಿರುವ ದೇಸಾಯಿ ಚಿತ್ರವನ್ನು ಬಾಗಲಕೋಟೆ ಒಳಗೊಂಡಂತೆ ಉತ್ತರ ಕರ್ನಾಟಕದಲ್ಲಿ ಬಹುತೇಕವಾಗಿ ಚಿತ್ರಿಕರಣ ಮಾಡಲಾಗಿದೆ. ಸ್ಥಳೀಯ ಕಲಾವಿದರು ಸಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.