

ಕುಷ್ಟಗಿ: ಸೇವಾ ನಿವೃತ್ತಿ ನಂತರ ಸ್ವಗ್ರಾಮಕ್ಕೆ ಹಿಂತಿರುಗಿದ ತಾಲೂಕಿನ ಗೋತಗಿ ಗ್ರಾಮದ ಯೋಧ ಅಂದಾನಯ್ಯ ಶಿವಾನಂದಯ್ಯ ಹಿರೇಮಠ ಅವರಿಗೆ ಪಟ್ಟಣದಲ್ಲಿ ಅದ್ದೂರಿ ಸ್ವಾಗತ ಕೋರಿ ಗ್ರಾಮಕ್ಕೆ ಬೀಳ್ಕೊಡಲಾಯಿತು.
ಜಮ್ಮು-ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ, ದೆಹಲಿ, ಗುಜರಾತ್, ಬರೋಡಾ, ಜೋಧಪುರ, ಹಿಮಾಚಲ ಪ್ರದೇಶ ಸೇರಿ ದೇಶದ ವಿವಿಧ ಗಡಿಗಳಲ್ಲಿ ಅಂದಾನಯ್ಯ ಸೇವೆ ಸಲ್ಲಿಸಿದ್ದಾರೆ.
ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ಅಭಿಮಾನಿಗಳು, ದಾರಿಯುದ್ದಕ್ಕೂ ಪುಷ್ಪದ ಸುರಿಮಳೆ ಗೈದರು. ವಿವಿಧ ವಾದ್ಯ ವೃಂದದೊಂದಿಗೆ ನಡೆದ ಮೆರವಣಿಗೆ ವೇಳೆ ಯುವಕರು ಪಟಾಕಿ ಸಿಡಿಸಿ ಜಯಘೋಷ ಕೂಗಿದರು. ಪ್ರಮುಖರಾದ ಮಹಾಂತಪ್ಪ ಕಮತರ್, ಗುರನಗೌಡ ಮುಕ್ಕಣ್ಣವರ್, ಶರಣಪ್ಪ ಚಕ್ರಗಟ್ಟಿ, ರಮೇಶ ಬೂದಿಹಾಳ, ಗುರುಲಿಂಗಪ್ಪ ಬೀಳಗಿ, ಅಂದಯ್ಯ ಹಿರೇಮಠ, ಗವಿಸಿದ್ದಪ್ಪ ಉಸಗಲಿ, ಭರಮಪ್ಪ ಪರಸಾಪುರ ಇತರರು ಇದ್ದರು.