

ಮೈಸೂರು: ಇಸ್ಕಾನ್ ವತಿಯಿಂದ ನಗರದಲ್ಲಿ ಶನಿವಾರ ಸಂಜೆ ಭಕ್ತಿಪೂರ್ವಕವಾಗಿ ಶ್ರೀ ಕೃಷ್ಣ-ಬಲರಾಮ ರಥಯಾತ್ರೆ ನೆರವೇರಿತು.
ರಥಯಾತ್ರೆಯಲ್ಲಿ ಅನೇಕ ಸಾಂಸ್ಕೃತಿಕ ಆಕರ್ಷಣೆಗಳು, ಮಂಗಳವಾದ್ಯ ಸಹಿತ ಇಸ್ಕಾನ್ ಭಕ್ತರಿಂದ ಸಂಕೀರ್ತನೆ ನಡೆಯಿತು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಆರಂಭಗೊಂಡ ರಥಯಾತ್ರೆ, ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ನ್ಯೂ ಕಾಂತರಾಜ್ ಅರಸು ರಸ್ತೆ, ಜಯನಗರ 2ನೇ ಮುಖ್ಯರಸ್ತೆಯ ಮೂಲಕ ಇಸ್ಕಾನ್ ದೇವಸ್ಥಾನ ತಲುಪಿತು. ಶ್ರೀಕೃಷ್ಣ ಬಲರಾಮರ ವಿಗ್ರಹವನ್ನು ಕೂರಿಸಿರುವ 35 ಅಡಿ ಎತ್ತರದ ರಥದ ಹಿಂದೆ ನೂರಾರು ಭಕ್ತರು ಸಾಗಿದರು.
ರಥೋತ್ಸವದುದ್ದಕ್ಕೂ ಶ್ರೀಕೃಷ್ಣ ಬಲರಾಮರಗೆ ಜೈಕಾರ ಮೊಳಗಿದವು. ಭಕ್ತರು ‘ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ರಾಮ ರಾಮ ಹರೇ ಹರೇ’ ಹೇಳುವ ಮೂಲಕ ಭಕ್ತಿಯ ಭಾವ ಮೆರೆದರು.
ಇದಕ್ಕೂ ಮುನ್ನ ಚೆನ್ನೈ ಇಸ್ಕಾನ್ ಅಧ್ಯಕ್ಷ ಸ್ತೋಕ ಕೃಷ್ಣಸ್ವಾಮಿ ಸಾನ್ನಿಧ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಕ ಶ್ರೀವತ್ಸ, ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್, ಮಾಜಿ ಶಾಸಕರಾದ ಎನ್.ಮಹೇಶ್, ಎಲ್.ನಾಗೇಂದ್ರ ರಥಯಾತ್ರೆಗೆ ಚಾಲನೆ ನೀಡಿದರು.