ಮೂಗೂರಿನಲ್ಲಿ ವಿಜೃಂಭಣೆಯ ವಧೆ ಉತ್ಸವ

ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಜಾತ್ರಾ ಮಹೋತ್ಸವದ ಅಂಗವಾಗಿ ರಾತ್ರಿ ಕಣಿಯರ ಸಮುದಾಯದವರ ವಿಶೇಷ ಪೂಜೆಯೊಂದಿಗೆ ಕಣಿಯರ ಮಂಟಪವು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವುದು.
ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಜಾತ್ರಾ ಮಹೋತ್ಸವದ ಅಂಗವಾಗಿ ರಾತ್ರಿ ಕಣಿಯರ ಸಮುದಾಯದವರ ವಿಶೇಷ ಪೂಜೆಯೊಂದಿಗೆ ಕಣಿಯರ ಮಂಟಪವು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವುದು.
Published on

ಮೂಗೂರು: ಇಲ್ಲಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ವಧೆ ಉತ್ಸವವು ಶುಕ್ರವಾರ ಸಡಗರದಿಂದ ನಡೆಯಿತು.

ಜ.3 ರಂದು ಆಸ್ಥಾನ ಅಂಕುರಾರ್ಪಣ ಮೂಲಕ ಜಾತ್ರೆಗೆ ಸಾಂಕೇತಿಕವಾಗಿ ಚಾಲನೆ ದೊರೆತಿದ್ದು, ಅಮ್ಮನವರ 7 ದಿನಗಳ ಮೌನವ್ರತ ದೊಂದಿಗೆ ರಾಕ್ಷಸರನ್ನು ಸಂಹಾರ ಮಾಡುವ ತಪ್ಪಸ್ಸಿನ ಆಚರಣೆಯೇ ವಧೆ ಉತ್ಸವ. ಪ್ರಮುಖ ರಸ್ತೆಗಳು ತಳಿರು ತೋರಣಗಳಿಂದ ಸಿಂಗರಿಸಿ ರಂಗೋಲಿಯ ಚಿತ್ತಾರದೊಂದಿಗೆ ಗ್ರಾಮದ ಅಂಬೇಡ್ಕರ್ ಬಡಾವಣೆಯ ಹೆಬ್ರೆ ಮನೆಯಿಂದ ಮುಖಂಡರೊಡನೆ ಹೊರಟ ಹೆಬ್ರೆ ಉತ್ಸವವು ದುಬ್ಲಮ್ಮನವರ ದೇಗುಲದಲ್ಲಿ ಕಂಕಣಧಾರಿ ಅರ್ಚಕರು ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇಗುಲಕ್ಕೆ ಆಗಮಿಸಿದರು.

ಮಾರ್ಗದುದ್ದಕ್ಕೂ ಮಹಿಳೆಯರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹೆಬ್ರೆಗಳಿಗೆ ಹೂ, ಅಕ್ಕಿ, ಎಣ್ಣೆಗಳನ್ನು ನೀಡಿ ನಮಿಸಿದರು. ದೇಗುಲದ ಸಮೀಪ ಆಗಮಿಸುವ ವೇಳೆ ರೈತರು ಭತ್ತದ ಹುಲ್ಲನ್ನು ತಂದು ಅಮ್ಮನವರ ದೇವಾಲಯದ ಮುಂದೆ ಹಾಕಲಾಗಿದ್ದ ಹುಲ್ಲಿನ ರಾಶಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಹೆಬ್ರೆಗಳ ಸಮೇತ ದೇಗುಲ ಪ್ರವೇಶಿಸಿ ಬಳಿಕ ಕಂಕಣಧಾರಿ ಅರ್ಚಕರು ಅಮ್ಮ ನವರಿಗೆ ವಿವಿಧ ಬಗೆಯ ಮಂಗಳಾರತಿ ಮಾಡಿದರು.

ದೊಡ್ಡ ಕೆರೆಯ ಬಳಿ ಇರುವ ಕಣಿಯರ ಮಂಟಪದಲ್ಲಿ ರಾತ್ರಿ ಕಣಿಯರ ಸಮುದಾಯದ ವತಿಯಿಂದ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉತ್ಸವ ನಡೆಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲ ಸಮುದಾಯದ ಮುಖಂಡರು, ಅರ್ಚಕ ಸಮೂಹ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net