

ಸುಂಟಿಕೊಪ್ಪ: ಐಗೂರು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದಿಂದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಇತ್ತೀಚೆಗೆ ಆಚರಿಸಲಾಯಿತು.
ಐಗೂರು ಕಸಾಪ ಘಟಕದ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್ ಕನ್ನಡ ಬಾವುಟ ಧ್ವಜಾರೋಹಣ ಮಾಡಿದ ನಂತರ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಕನ್ನಡಾಭಿಮಾನಿಗಳು ಅರ್ಪಿಸಿದರು.
ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್‌ಕುಮಾರ್ ಮಾತನಾಡಿ, ಕರ್ನಾಟಕದ ಜಲ, ನೆಲ, ಸಂಸ್ಕೃತಿ-ಸಂಪ್ರಾದಾಯವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಐಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಎಸ್.ಪೂರ್ಣಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುವರ್ಣ ಮಹೋತ್ಸವದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಈ ಕಾಲಘಟ್ಟದಲ್ಲಿ ಶಾಸ್ತ್ರೀಯ ಭಾಷೆಗೆ ಸೇರ್ಪಡೆಯಾಗುತ್ತಿರುವುದು ಅರ್ಥಪೂರ್ಣವಾಗಿದೆ. ಕನ್ನಡ ಭಾಷೆಗೆ ತನ್ನದೇ ಆದ ವಿಶಿಷ್ಠ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರವಿದೆ. ಕನ್ನಡ ಭಾಷೆಯನ್ನು ಇನ್ನಷ್ಟು ಗಟ್ಟಿಯಾಗಿ ಉಳಿಸಲು ಕನ್ನಡಾಭಿಮಾನಿಗಳು ಕೈಜೋಡಿಸಬೇಕೆಂದು ಕರೆ ನೀಡಿದರು.
ಸೋಮವಾರಪೇಟೆ ತಾಲೂಕು ಕಸಾಪ ಸದಸ್ಯ ಶಾಫಿ ಸದಿ ಮಾತನಾಡಿ, ಪ್ರಪಂಚದಲ್ಲೇ ವೈವಿಧ್ಯತೆಯಿಂದ ಕೂಡಿದ ಭಾಷೆ ಕನ್ನಡವಾಗಿದೆ. ಹೃದಯ ವಿಶಾಲತೆ ಹೊಂದಿದ ಕನ್ನಡಿಗರು ದೇಶದ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಹೇಳಿದರು.
ಕಾಜೂರು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ಭಾಷೆಯ ನೃತ್ಯ, ಭಾಷಣ, ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಐಗೂರು ಹೋಬಳಿ ಕಸಾಪ ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ರಾಜ್ ಅರಸು, ಕೋಶಾಧಿಕಾರಿ ಬೆಳ್ಯಪ್ಪ, ಮಾಚ್ಚಂಡ ಆಶೋಕ, ಹೇಮಂತ್, ಸೋಮವಾರಪೇಟೆ ತಾಲೂಕು ಕಸಾಪ ಖಜಾಂಜಿ ಕೆ.ಪಿ.ದಿನೇಶ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ, ಕಾಜೂರು ಶಾಲೆ ಮುಖ್ಯಶಿಕ್ಷಕಿ ಸರಳಾಕುಮಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಅನಸೂಯಾ ನಿರೂಪಿಸಿ, ಸರಳಾಕುಮಾರಿ ವಂದಿಸಿದರು.